ಫೋನ್ ಕದ್ದಾಲಿಕೆ ಪ್ರಕರಣ: ಸಿಬಿಐ ಕೋರ್ಟ್‍ಗೆ ಬಿ-ರಿಪೋರ್ಟ್ ಸಲ್ಲಿಕೆ; ಭಾಸ್ಕರ್ ರಾವ್ ಆಕ್ಷೇಪ

Update: 2021-08-31 16:36 GMT

ಬೆಂಗಳೂರು, ಆ.31: ಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಸಿಬಿಐ ಕೋರ್ಟ್‍ಗೆ ಸಲ್ಲಿಸಿದ ಬಿ-ರಿಪೆಪೋರ್ಟ್‍ಗೆ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸಾಕಷ್ಟು ಪುರಾವೆ ಹಾಗೂ ಸಾಕ್ಷ್ಯಾಧಾರ ಲಭ್ಯವಿದ್ದರೂ ಆರೋಪಿ ಸ್ಥಾನದಲ್ಲಿರುವ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹಾಗೂ ಪತ್ರಕರ್ತೆ ಹೆಸರನ್ನು ತನಿಖಾ ವರದಿಯಲ್ಲಿ ಸೇರಿಸಿಲ್ಲ. ಸಾಕ್ಷ್ಯಾಧಾರ ಕೊರತೆಯಿಂದ ಕೋರ್ಟ್‍ಗೆ ಸಿಬಿಐ ಬಿ-ರಿಪೋರ್ಟ್ ಸಲ್ಲಿಸಿದ್ದು ಸರಿಯಿಲ್ಲ. ಅಲ್ಲದೆ, ಇದು ಸಿಬಿಐ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ ಎಂಬುದು ನನ್ನ ಭಾವನೆ. ಈ ಸಂಬಂಧ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದೇನೆ ಎಂದರು. 

ಕಳೆದ ಎರಡು ವರ್ಷಗಳ ಹಿಂದೆ ಫರ್ಹಾಜ್ ಎಂಬುವರ ಜೊತೆ ಮಾತನಾಡಿರುವ ಕರೆಯನ್ನು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರು ಕಿರಿಯ ಪೊಲೀಸ್ ಅಧಿಕಾರಿಗಳಿಂದ ಫೋನ್ ಕದ್ದಾಲಿಕೆ ಮಾಡಿದ್ದರು. ಕರೆ ವಿವರವಿರುವ ಸಂಪೂರ್ಣ ಮಾಹಿತಿಯನ್ನು ಪೆನ್‍ಡ್ರೈವ್ ಮೂಲಕ ಹಾಕಿಕೊಳ್ಳಲಾಗಿತ್ತು. ತನಿಖೆಯಲ್ಲಿ ಎಲ್ಲಾ ಸಾಕ್ಷ್ಯಾಧಾರ ಲಭ್ಯವಿದ್ದರೂ ನ್ಯಾಯಾಲಯಕ್ಕೆ ಸಿಬಿಐ ಯಾಕೆ ಬಿ-ರಿಪೋರ್ಟ್ ಸಲ್ಲಿಸಿದೆ ಎನ್ನುವುದು ಗೋತ್ತಾಗುತ್ತಿಲ್ಲ ಎಂದು ಹೇಳಿದರು.

ಹಿರಿಯ ಐಪಿಎಸ್ ಅಧಿಕಾರಿಗಳ ಫೋನ್ ಟ್ಯಾಪಿಂಗ್ ಮಾಡಬೇಕಾದರೆ ರಾಜ್ಯ ಸರಕಾರದ ಅನುಮತಿ ಪಡೆಯಬೇಕು. ಆದರೆ, ನಿಯಮಗಳನ್ನು ಗಾಳಿಗೆ ತೂರಿ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಸಂಬಂಧ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದು, ಕಾನೂನು ಹೋರಾಟ ಮುಂದುವರೆಸಲಾಗುವುದು ಎಂದು ತಿಳಿಸಿದರು.

ಫೋನ್ ಟ್ಯಾಪಿಂಗ್ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಈ ಸಂಬಂಧ ತನಿಖೆ ಕೈಗೆತ್ತಿಕೊಂಡಿತ್ತು. ಐಟಿ ಕಾಯ್ದೆಯ ಸೆಕ್ಷನ್ 26 ಮತ್ತು ಇಂಡಿಯನ್ ಟೆಲಿಗ್ರಾಫ್ ಕಾಯ್ದೆಯಡಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News