ಗಣೇಶ ಚತುರ್ಥಿ ಆಚರಣೆಗೆ ನಿಯಮಾನುಸಾರ ಅವಕಾಶ ನೀಡಲಿ: ಶಾಸಕ ಝಮೀರ್ ಅಹ್ಮದ್ ಖಾನ್

Update: 2021-08-31 16:36 GMT

ಬೆಂಗಳೂರು, ಆ.31: ಕಳೆದ ಎರಡು ವರ್ಷಗಳಿಂದ ಯಾವ ಸಮಾಜದವರೂ ತಮ್ಮ ಹಬ್ಬಗಳನ್ನು ಸಂಭ್ರಮದಿಂದ ಆಚರಣೆ ಮಾಡಿಲ್ಲ. ಇತ್ತೀಚಿನ ದಿನಗಳಲ್ಲಿ ದೇವರ ದಯೆಯಿಂದ ಕೊರೋನ ಕಡಿಮೆಯಾಗಿದೆ. ನಿಯಮಗಳ ಅನ್ವಯ ಗಣೇಶ ಚತುರ್ಥಿ ಆಚರಣೆಗೆ ಸರಕಾರ ಅವಕಾಶ ಮಾಡಿಕೊಟ್ಟರೆ ಒಳ್ಳೆಯದು ಎಂದು ಕಾಂಗ್ರೆಸ್ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಮಂಗಳವಾರ ನಗರದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಚತುರ್ಥಿ ವಿಶೇಷವಾದದ್ದು. ಬೇರೆ ಹಬ್ಬಗಳಂತೆ ಈ ಹಬ್ಬವನ್ನು ಕೇವಲ ಒಂದು ದಿನದಲ್ಲಿ ಮುಗಿಸುವುದಿಲ್ಲ. ಕನಿಷ್ಠ 10-15 ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಈಗಿರುವ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ಕನಿಷ್ಠ ಪ್ರಮಾಣದಲ್ಲಿ ಜನರ ಪಾಲ್ಗೊಳ್ಳುವಿಕೆಯೊಂದಿಗೆ ನಾಲ್ಕೈದು ದಿನ ಆಚರಣೆ ಮಾಡಲು ಅವಕಾಶ ನೀಡಿದರೆ ಉತ್ತಮ ಎಂದರು.

ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂಬ ವಿಶ್ವಾಸವಿದೆ. ಜನರು ರಾಜ್ಯದಲ್ಲಿ ಬದಲಾವಣೆ ಬಯಸಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನೀಡಿರುವ ಕಾರ್ಯಕ್ರಮಗಳನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಿದ್ದಾರೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್ ಅವರಂತಹ ನಾಯಕರು ತಮ್ಮ ಪಕ್ಷದಲ್ಲಿದ್ದಾರೆ. ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್ ಅವರ ಸರಕಾರದಲ್ಲಿ ನೀಡಿದ ಕಾರ್ಯಕ್ರಮಗಳನ್ನು ರಾಜ್ಯದ ಯಾವೊಬ್ಬ ಪ್ರಜೆಯೂ ಮರೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News