ತಾಲಿಬಾನ್ ಗಳ ಸಾಮರ್ಥ್ಯವನ್ನು ಕೀಳಂದಾಜಿಸಬಾರದು: ಇತಿಹಾಸ ತಜ್ಞ ವಿಲಿಯಂ ಡಾಲ್ರಿಂಪಲ್

Update: 2021-08-31 16:43 GMT
photo:twitter/@DalrympleWill

ಲಂಡನ್, ಆ.31: ತಾಲಿಬಾನ್ಗಳನ್ನು ಕೀಳಂದಾಜಿಸಬಾರದು. ಅವರಿಗೆ ಪಾಕಿಸ್ತಾನದ ತರಬೇತಿ ಮತ್ತು ಆರ್ಥಿಕ ನೆರವು ಸಿಕ್ಕಿರುವುದರಲ್ಲಿ ಸಂದೇಹವಿಲ್ಲವಾದರೂ ಈಗ ಅವರು ತಮ್ಮನ್ನು ನಿಯಂತ್ರಿಸುವವರಿಂದ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಸಾಧ್ಯತೆಯಿದೆ ಎಂದು ಸ್ಕಾಟ್ಲ್ಯಾಂಡ್ ಮೂಲದ ಖ್ಯಾತ ಇತಿಹಾಸಜ್ಞ ವಿಲಿಯಂ ಡಾಲ್ರಿಂಪಲ್ ಹೇಳಿದ್ದಾರೆ.

ಅಫ್ಗಾನ್ನಿಂದ ಯೋಧರನ್ನು ವಾಪಸು ಕರೆಸಿಕೊಳ್ಳುವ ಅಮೆರಿಕ ಸರಕಾರದ ನಿರ್ಧಾರ ಕಾರ್ಯತಂತ್ರದ ದೃಷ್ಟಿಯಿಂದ ತಪ್ಪು ಮತ್ತು ಭಾವನಾತ್ಮಕವಾಗಿ ಹಾನಿಕರ ಎಂದು ಪರಿಗಣಿಸಬಹುದಾಗಿದೆ. ತಾಲಿಬಾನ್ ಎಂಬುದು ಸಂಪೂರ್ಣವಾಗಿ ಪಾಕಿಸ್ತಾನದ ಅಭಿಯಾನದ ಮುಂದುವರಿದ ಭಾಗ ಎಂದು ಕೆಲವು ಭಾರತೀಯ ಕಾರ್ಯತಂತ್ರಜ್ಞರು/ಸಾಹಿತಿಗಳು ಭಾವಿಸಿದ್ದರೆ ಅದು ಸರಿಯಲ್ಲ. ಇದು ಕಠಿಣ ಬಿಗಿನಿಲುವಿನ ಅತಿಸಂಪ್ರದಾಯಸ್ಥ ಗ್ರಾಮೀಣ ಅಫ್ಗಾನಿಸ್ತಾನವನ್ನು ಪ್ರತಿಬಿಂಬಿಸುವ ಅಫ್ಗಾನ್ ಚಳವಳಿಯಾಗಿದೆ. ಆದರೆ ಈ ಚಳವಳಿಗೆ ಕಳೆದ 20 ವರ್ಷದಿಂದ ಆರ್ಥಿಕ ನೆರವು, ತರಬೇತಿ, ಆಶ್ರಯ ನೀಡಿ ರಣಾಂಗಣಕ್ಕೆ ಕಳಿಸಿದ್ದು ಪಾಕಿಸ್ತಾನ ಎಂಬುದರಲ್ಲಿ ಸಂದೇಹವಿಲ್ಲ ಎಂದು ಪಿಟಿಐ ಜತೆ ಫೋನ್ ಮೂಲಕ ನಡೆಸಿದ ಸಂದರ್ಶನದಲ್ಲಿ ಡಾಲ್ರಿಂಪಲ್ ಹೇಳಿದ್ದಾರೆ.

 ಕೆಲವು ಬಲಪಂಥೀಯ ಭಾರತೀಯ ವಿಶ್ಲೇಷಕರು ತಾಲಿಬಾನ್ಗಳ ಬಗ್ಗೆ ಕೀಳಂದಾಜಿಸಿದ್ದಾರೆ. ಆದರೆ ತಾಲಿಬಾನ್ಗಳು ಮುಂದೆಯೂ ಪಾಕಿಸ್ತಾನದ ಕೈಗೊಂಬೆಯಾಗಿರಲು ಬಯಸದು ಎಂದು ನನಗನಿಸುತ್ತದೆ. ನೀವು ಬೇರೆಯವರ ಮನೆಯಲ್ಲಿ ಅತಿಥಿಗಳಾಗಿದ್ದರೆ ನಿಮಗಿಷ್ಟ ಬಂದಂತೆ ಅಲ್ಲಿ ವರ್ತಿಸಲು ಆಗದು. ಆದರೆ ಈಗ ತಾಲಿಬಾನ್ಗಳು ಪಾಕ್ ನ ಆಶ್ರಯ ತೊರೆದು ಅಫ್ಗಾನ್ ಗೆ ಮರಳಿದ್ದು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಅವರಲ್ಲಿದೆ. ಉಭಯ ದೇಶಗಳಿಗೂ ಸಮಾನವಾದ ಹಿತಾಸಕ್ತಿಯ ವಿಷಯದಲ್ಲಿ ಪಾಕ್ ಈಗಲೂ ತಾಲಿಬಾನ್ ಗಳ ಮೇಲೆ ಪ್ರಭಾವ ಬೀರಬಹುದು. ಆದರೆ ಉಭಯರ ಹಿತಾಸಕ್ತಿ ಭಿನ್ನವಾಗಿದ್ದರೆ ಆಗ ತಾಲಿಬಾನ್ ಸ್ವತಂತ್ರ ನಿರ್ಧಾರ ಕೈಗೊಳ್ಳಲಿದೆ. ಇದುವರೆಗಿನ ವಿದ್ಯಮಾನಗಳಿಂದ ಪಾಕ್ಗೆ ಖುಷಿಯಾಗಿರಬಹುದು, ಆದರೆ ಭಾರತ, ಅಮೆರಿಕ ಮತ್ತು ಬ್ರಿಟನ್ ನ ಪ್ರಭಾವ ಮತ್ತು ಅಧಿಕಾರ ಕುಗ್ಗಿದೆ.

ಕಳೆದ 100 ವರ್ಷದಲ್ಲಿನ ಅಮೆರಿಕದ ವಿದೇಶ ನೀತಿಯಲ್ಲಿ ಅಫ್ಗಾನ್ ಕುರಿತ ಕಾರ್ಯನೀತಿ ಅತ್ಯಂತ ಕಾರ್ಯತಂತ್ರಾತ್ಮಕ ತಪ್ಪುಗಳಿಂದ ಕೂಡಿದ ಅಧ್ಯಾಯವಾಗಿದ್ದು ದೇಶದ ಪ್ರತಿಷ್ಠೆಗೆ ಅಗಾಧ ಹಾನಿಯುಂಟು ಮಾಡಿದೆ. ಈ ನಡೆ ಅಮೆರಿಕದ ಶತ್ರುಗಳಿಗೆ ಪ್ರಮುಖ ಗೆಲುವು ತಂದಿತ್ತರೆ ಭಾರತ, ಬ್ರಿಟನ್ ಸಹಿತ ಮಿತ್ರರಾಷ್ಟ್ರಗಳ ನಿಲುವಿಗೆ ಆಗಿರುವ ಹಿನ್ನಡೆಯಾಗಿದೆ ಎಂದು ವಿಲಿಯಂ ಡಾಲ್ರಿಂಪಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News