ಜೀವನ ಸಂಗಾತಿ ಬೇಕು ಎಂದು ಅಂಗಡಿ ಮುಂದೆ ಫಲಕ ಹಾಕಿದ ವ್ಯಕ್ತಿಗೆ ವಿದೇಶಗಳಿಂದ ಕರೆ !

Update: 2021-09-01 06:08 GMT
Photo : the new indian express

ತ್ರಿಶ್ಶೂರ್ : 33 ವರ್ಷ ವಯಸ್ಸಿನ ವಲ್ಲಚಿರಾ ನಿವಾಸಿ ಎನ್.ಎನ್.ಉನ್ನಿಕೃಷ್ಣನ್ ಇದೀಗ ಮಧ್ಯವರ್ತಿಗಳ ನೆರವು ಇಲ್ಲದೇ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ತಮ್ಮ ಅಂಗಡಿಯ ಎದುರು ಜೀವನ ಸಂಗಾತಿ ಬೇಕು ಎಂಬ ಫಲಕ ಅಳವಡಿಸಿದ್ದಾರೆ.

"ಜೀವನ ಸಂಗಾತಿ ಬೇಕಾಗಿದ್ದಾಳೆ. ಜಾತಿ ಅಥವಾ ಧರ್ಮ ಸಮಸ್ಯೆಯಲ್ಲ" ಎಂಬ ಫಲಕದ ಚಿತ್ರವನ್ನು ಈ ಯುವಕನ ಸ್ನೇಹಿತ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಇದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಉನ್ನಿಕೃಷ್ಣನ್‌ಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಿಂದ ಕೂಡಾ ಕರೆಗಳು ಬಂದಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಉನ್ನಿಕೃಷ್ಣನ್, ತಾವು ಸ್ವೀಕರಿಸಿದ ವಿವಾಹ ಪ್ರಸ್ತಾವನೆಗಳನ್ನು ತಮ್ಮ ಬೀದಿ ಬದಿ ಅಂಗಡಿಯಲ್ಲಿ ವಿಂಗಡಿಸುವಲ್ಲಿ ನಿರತರಾಗಿದ್ದಾರೆ.

"ನಾನು ದಿನಗೂಲಿ ಕಾರ್ಮಿಕನಾಗಿದ್ದೆ. ಮೆದುಳಿನಲ್ಲಿ ಟ್ಯೂಮರ್ ಆದ ಬಳಿಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೆ. ಶಸ್ತ್ರಚಿಕಿತ್ಸೆ ಬಳಿಕ ಸಂಪೂರ್ಣ ಚೇತರಿಸಿಕೊಂಡಿದ್ದೇನೆ. ಇದೀಗ ಜೀವನದಲ್ಲಿ ನೆಲೆ ಕಂಡುಕೊಳ್ಳುವ ಉದ್ದೇಶದಿಂದ ಮನೆ ಪಕ್ಕದಲ್ಲಿ ಕಳೆದ ಫೆಬ್ರುವರಿಯಲ್ಲಿ ಲಾಟರಿ ಅಂಗಡಿ ತೆರೆದೆ. ಇದಾದ ಬಳಿಕ ಚಹಾ ಅಂಗಡಿ ಆರಂಭಿಸಿದೆ. ಈಗ ಜೀವನ ಸಂಗಾತಿ ಬೇಕು ಎನಿಸಿದೆ. ಆದರೆ ಸಾಂಪ್ರದಾಯಿಕ ರೀತಿಯಲ್ಲಿ ದಲ್ಲಾಳಿಗಳನ್ನು ಸಂಪರ್ಕಿಸುವ ಅಥವಾ ಜಾತಕ ಹೊಂದಾಣಿಕೆಯ ಬದಲು ಚಹಾ ಅಂಗಡಿ ಮುಂದೆ ಫಲಕ ನೇತು ಹಾಕುವ ನಿರ್ಧಾರಕ್ಕೆ ಬಂದೆ"’ ಎಂದು ಉನ್ನಿಕೃಷ್ಣನ್ ಹೇಳುತ್ತಾರೆ.

ಈತನ ಸ್ನೇಹಿತ ಸಾಜಿ ಎಡಪಿಲ್ಲಿ ಈ ಫಲಕದ ಫೋಟೊ ಹೊಡೆದು ಫೇಸ್‌ಬುಕ್‌ನಲ್ಲಿ ಪ್ರಸರಿಸಿ, ಉನ್ನಿಕೃಷ್ಣನ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಬೇರೆ ದೇಶಗಳಲ್ಲಿ ವಾಸಿಸುವ ಮಲೆಯಾಳಿಗಳಿಂದ ಕರೆಗಳು ಬರುತ್ತಿವೆ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News