ಈಶಾನ್ಯ ದಿಲ್ಲಿ ದಂಗೆಗಳು: ಒಂದೇ ಘಟನೆಗೆ ಪ್ರತ್ಯೇಕ ಎಫ್ಐಆರ್ ದಾಖಲಿಸುವಂತಿಲ್ಲ; ದಿಲ್ಲಿ ಹೈಕೋರ್ಟ್

Update: 2021-09-03 05:02 GMT

ಹೊಸದಿಲ್ಲಿ,ಸೆ.2: ಈಶಾನ್ಯ ದಿಲ್ಲಿಯಲ್ಲಿ 2020 ಫೆಬ್ರವರಿಯಲ್ಲಿ ಸಂಭವಿಸಿದ್ದ ಕೋಮು ದಂಗೆಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆರೋಪಿಯೋರ್ವನ ವಿರುದ್ಧ ದಾಖಲಾಗಿದ್ದ ಐದು ಎಫ್ಐಆರ್ ಗಳ ಪೈಕಿ ನಾಲ್ಕನ್ನು ರದ್ದುಗೊಳಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯವು,ಒಂದೇ ಘಟನೆಗಾಗಿ ವ್ಯಕ್ತಿಯೋರ್ವನ ವಿರುದ್ಧ ಪ್ರತ್ಯೇಕ ಎಫ್ಐಆರ್ ಗಳನ್ನು ದಾಖಲಿಸುವಂತಿಲ್ಲ ಎಂದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯವು ನಿರೂಪಿಸಿರುವ ನೀತಿಗಳಿಗೆ ಅನುಗುಣವಾಗಿ ಈ ವಿಷಯದಲ್ಲಿ ಕಾನೂನು ಸ್ಪಷ್ಟವಾಗಿದೆ ಎಂದು ಹೇಳಿದ ನ್ಯಾ.ಸುಬ್ರಮಣಿಯಂ ಪ್ರಸಾದ ಅವರು,ಒಂದೇ ರೀತಿಯ ಸಂಜ್ಞೇಯ ಅಪರಾಧ ಅಥವಾ ಒಂದೇ ಘಟನೆಯಿಂದ ಒಂದು ಅಥವಾ ಹೆಚ್ಚಿನ ಸಂಜ್ಞೇಯ ಅಪರಾಧಗಳಿದ್ದಾಗ ಎರಡನೇ ಎಫ್ಐಆರ್ ದಾಖಲಿಸುವಂತಿಲ್ಲ ಮತ್ತು ಹೊಸದಾಗಿ ತನಿಖೆಯನ್ನು ನಡೆಸುವಂತಿಲ್ಲ ಎಂದು ಹೇಳಿದರು.
 
ಈಶಾನ್ಯ ದಿಲ್ಲಿ ದಂಗೆಗಳಿಗೆ ಸಂಬಂಧಿಸಿದಂತೆ ವೌಜಪುರದಲ್ಲಿ ಮನೆಗೆ ಬೆಂಕಿ ಹಚ್ಚಿದ್ದ ಆರೋಪದಲ್ಲಿ ಆತಿರ್ ಎಂಬಾತನ ವಿರುದ್ಧ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಘಟನೆ ನಡೆದಿದ್ದ ವಸತಿ ಸಂಕೀರ್ಣದಲ್ಲಿ ವಾಸವಾಗಿರುವ ಒಂದೇ ಕುಟುಂಬದ ಐವರು ಸದಸ್ಯರು ಸಲ್ಲಿಸಿರುವ ದೂರುಗಳ ಆಧಾರದಲ್ಲಿ ತನ್ನ ಕಕ್ಷಿದಾರನ ವಿರುದ್ಧ ಐದು ಎಫ್ಐಆರ್ ಗಳನ್ನು ದಾಖಲಿಸಿದ್ದನ್ನು ಆತಿರ್ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ವಸತಿ ಸಂಕೀರ್ಣದ ನಿವಾಸಿಗಳು ತಮ್ಮ ಆಸ್ತಿಗೆ ಉಂಟಾದ ಹಾನಿಯಿಂದಾಗಿ ವ್ಯಕ್ತಿಗತವಾಗಿ ತೊಂದರೆಗೀಡಾಗಿದ್ದಾರೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದರಾದರೂ,ವಸತಿ ಸಂಕೀರ್ಣದ ಸ್ಥಳ ನಕಾಶೆಯನ್ನು ಪರಿಶೀಲಿಸಿದ ನ್ಯಾಯಾಧೀಶರು,ಹಾನಿಯಾಗಿದ್ದರೂ ಎಲ್ಲ ಆಸ್ತಿಗಳು ಒಂದೇ ವಠಾರದಲ್ಲಿವೆ ಮತ್ತು ಸದ್ರಿ ವಠಾರದಲ್ಲಿ ಹೆಚ್ಚಿನ ಮನೆಗಳು ಒಂದೇ ಕುಟುಂಬಕ್ಕೆ ಸೇರಿವೆ ಎಂದು ಬೆಟ್ಟು ಮಾಡಿದರು. ಎಫ್ಐಆರ್ ಗಳ ಒಂದೇ ರೀತಿಯಲ್ಲಿವೆ ಎಂದು ಹೇಳಿದ ನ್ಯಾಯಾಲಯವು,ಆರೋಪಿಯ ವಿರುದ್ಧ ಹೊಸ ಸಾಕ್ಷವೇನಾದರೂ ಲಭಿಸಿದರೆ ಅದನ್ನು ಮುಖ್ಯ ಪ್ರಕರಣದಲ್ಲಿ ದಾಖಲಿಸುವಂತೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News