`ಇಂಡಿಯಾ ಸೇಲ್' ಬಗ್ಗೆ ಬಿಜೆಪಿಯವರ ಬಾಯಿ ಸತ್ತು ಹೋಗಿದೆ: ದಿನೇಶ್ ಗುಂಡೂರಾವ್

Update: 2021-09-02 11:31 GMT

ಬೆಂಗಳೂರು, ಸೆ. 2: `ಮೋದಿಯವರು ಬಾಲ್ಯದಲ್ಲಿ ಚಹಾ ಮಾರುತ್ತಿದ್ದ ಬಗ್ಗೆ ಬಿಜೆಪಿಯವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಚಾಯ್‍ವಾಲಾ ಮೋದಿ, ಈಗ ಪ್ರಧಾನಿಯಾಗಿ ದೇಶ ಮಾರುತ್ತಿದ್ದಾರೆ. ಸಾರ್ವಜನಿಕ ಆಸ್ತಿಗಳನ್ನು ಮಾರಿ, ದೇಶವನ್ನು ಊಳಿಗಮಾನ್ಯ ಸ್ಥಿತಿಯತ್ತ ಕೊಂಡೊಯ್ಯುತ್ತಿದ್ದಾರೆ. ದುರಂತವೆಂದರೆ ಮೋದಿಯವರ ಸೇಲ್ ಇಂಡಿಯಾ ಸೇಲ್ ಬಗ್ಗೆ ಬಿಜೆಪಿಯವರ ಬಾಯಿ ಸತ್ತು ಹೋಗಿದೆ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, `30 ವರ್ಷಗಳ ಹಿಂದಿನ ಉದಾರೀಕರಣ ದೇಶದ ಆರ್ಥಿಕ ಅಭಿವೃದ್ಧಿಗೆ ಮುನ್ನುಡಿ ಬರೆದಿತ್ತು. ಆದರೆ ಲೂಟಿಕೋರ ಕೇಂದ್ರದ ಬಿಜೆಪಿ ಸರಕಾರ ಅಧಿಕಾರ ಹಿಡಿದ ಕ್ಷಣದಿಂದ ಉದಾರೀಕರಣದ ಆಶಯ ಮಣ್ಣು ಪಾಲಾಗಿ ಹೋಗಿದೆ. ಸಂತೆಯಲ್ಲಿ ವ್ಯಾಪಾರ ಮಾಡಿದಂತೆ ದೇಶದ ಆಸ್ತಿಯನ್ನು ಈ ಸರಕಾರ ಮಾರಾಟ ಮಾಡುತ್ತಿದೆ. ದೇಶದ ಆರ್ಥಿಕತೆ ಮತ್ತೆ 30 ವರ್ಷಗಳ ಹಿಂದಕ್ಕೆ ಸರಿದಿದೆ' ಎಂದು ಆರೋಪಿಸಿದ್ದಾರೆ.

`ಅನ್ನ ನೀರು ಸಮೃದ್ಧವಾಗಿರುವ ರಾಜ್ಯದಲ್ಲಿ ಪ್ರಜಾಕ್ಷೋಭೆ ಇರುವುದಿಲ್ಲ ಎಂಬುದು ಚಾಣಕ್ಯನ ತತ್ವ. ಆದರೆ, ಮೋದಿ ಸರಕಾರದ ತೆರಿಗೆ ಭಾರಕ್ಕೆ ಜನರಿಗೆ ಅನ್ನ ನೀರೂ ಸಿಗದಂತಾಗಿದೆ. ಬ್ರಿಟಿಷರಿಗಿಂತಲೂ ಕ್ರೂರವಾಗಿ ತೆರಿಗೆ ವಿಧಿಸುತ್ತಿರುವ ಈ ಸರಕಾರ, ಸಂಪತ್ತು ಕೊಳ್ಳೆ ಹೊಡೆಯುತ್ತಾ ತಾಳ್ಮೆ ಪರೀಕ್ಷಿಸುತ್ತಿದೆ. ಪ್ರಜಾಕ್ಷೋಭೆಗೆ ಕಾಲ ದೂರವಿಲ್ಲ' ಎಂದು ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ.

`ಆರ್ಥಿಕ ಸಂಕಷ್ಟ, ಉದ್ಯೋಗ ನಷ್ಟ, ಜಿಡಿಪಿ ಕುಸಿತ, ಏರಿದ ಹಸಿವಿನ ಸೂಚ್ಯಂಕ, ಕೇಂದ್ರ ಸರಕಾರ ದೇಶಕ್ಕೆ ಕೊಟ್ಟ ಅನಿಷ್ಟ ಕೊಡುಗೆಗಳು. ಈ ಮಧ್ಯೆ ಬೆಲೆ ಏರಿಕೆಯೆಂಬ ದಿನನಿತ್ಯದ ರಗಳೆಯಲ್ಲಿ ಜನ ಸಾಮಾನ್ಯ ಬೆಂದು ಬೇಸತ್ತು ಹೋಗಿದ್ದಾನೆ.

ಬಿಜೆಪಿಯವರು ರಾಮರಾಜ್ಯ ಮಾಡುವ ಬೊಗಳೆ ಬಿಟ್ಟಿದ್ದರು. ಆದರೆ, ಈಗ ದಟ್ಟ ದರಿದ್ರರ ದೇಶ ಮಾಡಲು ಹೊರಟಿದ್ದಾರೆ' ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News