ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ತಾತ್ಕಾಲಿಕ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

Update: 2021-09-02 13:29 GMT

ಬೆಂಗಳೂರು, ಸೆ. 2: `ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ತಾತ್ಕಾಲಿಕ. ಅದು ಮುಂದಿನ ದಿನಗಳಲ್ಲಿ ಕಡಿಮೆ ಆಗಲಿದೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ಮಲ್ಲೇಶ್ವರದ `ಹವ್ಯಕರ ಭವನ'ದಲ್ಲಿ ನಡೆದ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲೆಯ ಪದಾಧಿಕಾರಿಗಳ ಸಭೆಯ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, `ತೈಲ ಬೆಲೆ ಹೆಚ್ಚಳದ ಜೊತೆ ಜೊತೆಗೆ ಹಣದುಬ್ಬರದ ಪರಿಸ್ಥಿತಿಯನ್ನೂ ಗಮನಿಸಿ. ಯುಪಿಎ ಆಡಳಿತದಲ್ಲಿ ಹಣದುಬ್ಬರವು ಶೇ.15ರಿಂದ 20ರಷ್ಟಿತ್ತು. ಆದರೆ, ಈಗ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆಯು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಎರಡ್ಮೂರು ವರ್ಷಗಳಿಂದ ಅದು ಶೇ.2ರಿಂದ 3ರಷ್ಟಿದೆ ಎಂದು ತಿಳಿಸಿದರು.

ಕೇವಲ 100 ದಿನಗಳಲ್ಲಿ ಹಣದುಬ್ಬರವನ್ನು ನಿಯಂತ್ರಿಸಲಾಗುವುದು ಎಂದು ಯುಪಿಎ ಸರಕಾರದ ಹಣಕಾಸು ಸಚಿವ ಚಿದಂಬರಂ ಹಿಂದೊಮ್ಮೆ ಹೇಳಿದ್ದರು. ಆದರೆ, ಅದು ಏರುತ್ತಲೇ ಹೋಯಿತು. ಬೆಲೆ ಏರಿಕೆ ನಿಯಂತ್ರಣ ಮಾಡಲಾಗಲಿಲ್ಲ ಎಂದ ಅರುಣ್ ಸಿಂಗ್, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟಿದೆ ಎಂದರಲ್ಲದೆ, ಡಬಲ್ ಇಂಜಿನ್ ಸರಕಾರ ಕೇಂದ್ರ-ರಾಜ್ಯದಲ್ಲಿದೆ. ಭಾರತ್ ಮಾಲಾದಡಿ ರಸ್ತೆಗಳ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಕ್ಕೆ ಆದ್ಯತೆ ಕೊಡಲಾಗುತ್ತಿದೆ ಎಂದರು.

ಕರ್ನಾಟಕಕ್ಕೆ ಮೋದಿ ಅವರ ಸಂಪೂರ್ಣ ಆಶೀರ್ವಾದವಿದೆ. ಗರಿಷ್ಠ ಅನುದಾನ ನೀಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರವೂ ಉತ್ತಮವಾಗಿ ಕೆಲಸ ಮಾಡುತ್ತಿದೆ. ಪ್ರತಿ ಮನೆಗೆ ನಲ್ಲಿ ನೀರು ಒದಗಿಸುವ ಕೆಲಸ ಸಾಗುತ್ತಿದೆ. ರೈತರ ಖಾತೆಗೆ 6 ಸಾವಿರ ರೂಪಾಯಿ ಸಂದಾಯ ಮಾಡುತ್ತಿದ್ದೇವೆ. ಆಯುಷ್ಮಾನ್ ಭಾರತ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಹಣ ಬೇಕಿದೆ. ಸರಕಾರಕ್ಕೆ ಬರುವ ತೆರಿಗೆ ಭ್ರಷ್ಟಾಚಾರರಹಿತವಾಗಿ ಬಳಕೆಯಾಗುತ್ತಿದೆ ಎಂದು ಅವರು ನುಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಪಕ್ಷವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಗರಿಷ್ಠ ಶಾಸಕರನ್ನು ಗೆಲ್ಲಿಸಲಿದೆ. ಬಡವರು, ರೈತರು, ಮಹಿಳೆಯರು ಮತ್ತು ಜನಸಾಮಾನ್ಯರಿಗಾಗಿ ಮೋದಿ ಅವರು ಜಾರಿಗೊಳಿಸಿದ ವಿವಿಧ ಯೋಜನೆಗಳ ಬಗ್ಗೆ ತಿಳಿಸಬೇಕು ಮತ್ತು ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ಮೈಸೂರು, ಹಾಸನ ಪ್ರವಾಸದ ವೇಳೆ ತಿಳಿಸಿದ್ದಾಗಿ ಹೇಳಿದರು. 

ದಲ್ಲಾಳಿಗಳ ಯೋಚನೆ ದಲ್ಲಾಳಿಗಳಂತೆ ಇರುತ್ತದೆ. ಅದೇ ಮಾದರಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಟೀಕೆ ಇದೆ ಎಂದ ಅರುಣ್ ಸಿಂಗ್, ಎಚ್‍ಡಿಕೆ ಮಾತಿಗೆ ತಿರುಗೇಟು ನೀಡಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್, ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ, ಬೆಂ.ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್.ರಮೇಶ್ ಮತ್ತು ಬೆಂ.ಉತ್ತರ ಜಿಲ್ಲಾಧ್ಯಕ್ಷ ಬಿ.ನಾರಾಯಣಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News