ಅಸ್ಸಾಂ ರಾಷ್ಟ್ರೀಯ ಉದ್ಯಾನಕ್ಕೆ ಮರು ನಾಮಕರಣ: ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ

Update: 2021-09-02 15:22 GMT

ಗುವಾಹತಿ, ಸೆ. 2: ಅಸ್ಸಾಂನ ರಾಜೀವ್ ಗಾಂಧಿ ರಾಷ್ಟೀಯ ಉದ್ಯಾನಕ್ಕೆ ಒರಾಂಗ್ ರಾಷ್ಟ್ರೀಯ ಉದ್ಯಾನ ಎಂದು ಮರು ನಾಮಕರಣ ಮಾಡಿದ ರಾಜ್ಯದ ಬಿಜೆಪಿ ನೇತೃತ್ವದ ಸರಕಾರದ ಬಗ್ಗೆ ಕಾಂಗ್ರೆಸ್ ಗುರುವಾರ ಆಕ್ರೋಶ ವ್ಯಕ್ತಪಡಿಸಿದೆ. 

ಆದಿವಾಸಿ ಹಾಗೂ ಬುಡಕಟ್ಟು ಸಮುದಾಯದ ಆಗ್ರಹವನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರ ಹೇಳಿದೆ. ಬಿಜೆಪಿ ಸರಕಾರದ ಈ ಸಣ್ಣತನವನ್ನು ಕಾಂಗ್ರೆಸ್ ಖಂಡಿಸಿದೆ. ಪಾರ್ಕ್ ಅಥವಾ ಸಂಸ್ಥೆಗಳ ಹೆಸರನ್ನು ಬದಲಾಯಿಸುವ ಮೂಲಕ ಭವಿಷ್ಯ ಭಾರತದ ನಿರ್ಮಾತೃವಾಗಿರುವ ರಾಜೀವ್ ಗಾಂಧಿ ಅವರ ಹೆಸರನ್ನು ಅಳಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ. 

ಚರಿತ್ರೆಯನ್ನು ಮರು ಬರೆಯವ ತಮ್ಮ ಕಾರ್ಯಸೂಚಿಗೆ ಬಿಜೆಪಿ ಇಂದು ಬಳಸುತ್ತಿರುವ ಕಂಪ್ಯೂಟರ್ ಹಾಗೂ ಮೊಬೈಲ್ ಫೋನ್ ಗಳು ರಾಜೀವ್ ಗಾಂಧಿ ಅವರು ತಂದ ಮಾಹಿತಿ ತಂತ್ರಜ್ಞಾನದ ಕ್ರಾಂತಿಯಿಂದ ಲಭ್ಯವಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ನ ನಾಯಕ ಭೂಪೇನ್ ಬೊರಾಹ್ ಹೇಳಿದ್ದಾರೆ. ಪಂಚಾಯತ್ ಗಳಲ್ಲಿ ಶೇ. 33 ಮೀಸಲಾತಿ ನೀಡುವ ಮೂಲಕ ತಳಮಟ್ಟದಲ್ಲಿ ಮಹಿಳೆಯರ ಸಶಕ್ತೀಕರಣಕ್ಕೆ ಹಾಗೂ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸುವ ಮೂಲಕ ರಾಜಕೀಯ ನಿರ್ಧಾರ ತೆಗೆದುಕೊಳ್ಳವುಲ್ಲಿ ಯುವಕರನ್ನು ಉತ್ತೇಜಿಸುವಲ್ಲಿ ರಾಹುಲ್ ಗಾಂಧಿ ಅವರ ಕೊಡುಗೆಯನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. 

ಆದರೆ, ಬಿಜೆಪಿ ಇಂದು ಇಂತಹ ರಾಜಕೀಯವನ್ನು ನೆನಪಿಸುತ್ತಿಲ್ಲ. ಅದು ಕೇವಲ ಸಂಸ್ಥೆಗಳ ಹೆಸರು ಬದಲಾಯಿಸುವುದು, ಭಾರತದ ಚರಿತ್ರೆಯನ್ನು ಕಾರ್ಯ ಸೂಚಿ ಆಧಾರಿತವಾಗಿ ಪುನಃ ಬರೆಯವುಲ್ಲಿ ಮಾತ್ರ ತೊಡಗಿಕೊಂಡಿದೆ. ದೇಶಕ್ಕೆ ಬಿಜೆಪಿಯ ಕೊಡುಗೆ ಯಾವುದೂ ಇಲ್ಲ. ಅವರು ಸರಕಾರ ರಚಿಸಲು ಇತರ ಪಕ್ಷಗಳಿಂದ ರಾಜಕಾರಣಿಗಳನ್ನು ಖರೀದಿಸುತ್ತಿದ್ದಾರೆ ಎಂದು ಬೊರಾಹ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News