ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಯಾಣದಿಂದ ಕೋವಿಡ್ ಹೆಚ್ಚಳ: ಬಿಬಿಎಂಪಿ ಮುಖ್ಯಆಯುಕ್ತ ಗೌರವ್ ಗುಪ್ತಾ

Update: 2021-09-03 18:36 GMT

ಬೆಂಗಳೂರು, ಸೆ.3: ಬಿಬಿಎಂಪಿಯ ಕೆಲ ಭಾಗಗಳಲ್ಲಿ ಕೋವಿಡ್ ಉಲ್ಬಣಗೊಳ್ಳಲು ನಾಗರಿಕರು ಪ್ರಯಾಣ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದೇ ನೇರ ಕಾರಣವಾಗಿದೆ ಎಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್ ಗುಪ್ತಾ ಆತಂಕ ವ್ಯಕ್ತಪಡಿಸಿದ್ದಾರೆ. 

ಶುಕ್ರವಾರ ಬಿಬಿಎಂಪಿ ಕೇಂದ್ರಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಮಹಾದೇವಪುರ, ಪೂರ್ವ ವಿಭಾಗದಲ್ಲಿ ಕೊಂಚ ಮಟ್ಟಿಗೆ ಕೊರೋನ ಪ್ರಕರಣಗಳು ಹೆಚ್ಚಾಗಿದೆ. ಇದಕ್ಕೆ ಇಲ್ಲಿನ ಜನರು ಅಂತರ್‍ರಾಜ್ಯ, ವಿದೇಶ ಪ್ರಯಾಣ ಕೈಗೊಂಡಿರುವುದೇ ಮುಖ್ಯ ಕಾರಣವೆಂದು ತಿಳಿಸಿದ್ದಾರೆ.

ಬಹುತೇಕ ಐಟಿ ಕಂಪನಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದರೂ, ಹಲವುರ ಮೋಜು ಮಸ್ತಿ, ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಗರಕ್ಕೆ ವಾಪಸ್ಸು ಆಗುತ್ತಾರೆ. ಸೋಂಕು ಹರಡಲು ಇದೊಂದು ಕಾರಣವೂ ಆಗಿದೆ. ಯಾರೇ ಆಗಲಿ ಇನ್ನಷ್ಟು ದಿನಗಳ ಕಾಲ ಎಚ್ಚರವಹಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಯಾರು ಸೋಂಕಿತರು ಅವರನ್ನು ಕ್ವಾರಂಟೈನ್ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಸೋಂಕು ಕಂಡುಬಂದರೆ, ಕ್ವಾರಂಟೈನ್, ಸೀಲ್‍ಡೌನ್ ಮಾಡಿ ಎಚ್ಚರ ವಹಿಸಲಾಗುತ್ತಿದೆ. ಹಾಗೇ, ಪ್ರದೇಶವಾರು ಕ್ಲಸ್ಟರ್‍ಗಳೆಂದು ಗುರುತಿಸಿ, ಪಾಲಿಕೆ ಆರೋಗ್ಯಾಧಿಕಾರಿಗಳು ವಿಶೇಷ ಗಮನ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಕೋವಿಡ್ ಮುಕ್ತ ಸಾಧ್ಯವಿಲ್ಲ: ಈಗಾಗಲೇ ಪ್ರಪಂಚದ ಮುಂದುರೆದ ದೇಶಗಳು ಕೋವಿಡ್ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿವೆ. ಇಸ್ರೇಲ್, ಅಮೆರಿಕಾ, ಇಂಗ್ಲೇಡ್ ಸೇರಿದಂತೆ ಇನ್ನಿತರೆ ದೇಶಗಳಲ್ಲಿ ಹೊಸ ತಳಿಯ ಕೊರೋನ ಸೋಂಕು ಹಬ್ಬಿದೆ. ಹೀಗಾಗಿ, ನಾವು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ದೈನಿಕ ಚಟುವಟಿಕೆಗಳನ್ನು ಮುಂದುವರೆಸಬೇಕಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಈಗ 8ರಿಂದ 10 ಕೋವಿಡ್ ಕೇರ್ ಸೆಂಟರ್‍ಗಳನ್ನು ನಿರ್ವಹಿಸುತ್ತಿದ್ದು, ರೋಗಿಗಳ ಸಂಖ್ಯೆಯೂ ತಗ್ಗಿದೆ. ಆದರೆ, ಇಲ್ಲಿ ಆಹಾರ ಗುಣಮಟ್ಟ ಸರಿಯಿಲ್ಲ ಎನ್ನುವ ದೂರು ಕೇಳಿಬಂದಿದ್ದು, ಈ ಸಂಬಂಧ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ಅವರು ಹೇಳಿದ್ದಾರೆ.


ಹಬ್ಬ ಜಾಗೃತಿ ಅಗತ್ಯ

ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳ ಆಚರಣೆ ಇದ್ದು, ಈ ಬಗ್ಗೆ ಎಲ್ಲರೂ ಜಾಗೃತಿಯಿಂದ ಇರಬೇಕು. ಒಂದು ವೇಳೆ ಕೋವಿಡ್ ಮಾರ್ಗಸೂಚಿ ಕೈಬಿಟ್ಟರೆ, ಅಪಾಯ ಎದುರಾಗಲಿದೆ. ಎಲ್ಲರೂ ಲಸಿಕೆ ಪಡೆಯುವಂತೆ ಆಗಬೇಕು. ಆಗ ಕೋವಿಡ್ ಸೋಂಕು ತಗಲಿದರೂ, ಗಂಭೀರ ಪರಿಣಾಮ ಬೀರಲ್ಲ.

-ಗೌರವ್ ಗುಪ್ತಾ, ವಿಶೇಷ ಆಯುಕ್ತ, ಬಿಬಿಎಂಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News