ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಮಹತ್ತರ ಕೊಡುಗೆ ನೀಡುತ್ತಿರುವ ಮೌಲಾನಾ ಆಝಾದ್ ಮಾದರಿ ಶಾಲೆಗಳು

Update: 2021-09-04 19:30 GMT

ಈ ಶಾಲೆಗಳು ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶೈಕ್ಷಣಿಕ ಭವಿಷ್ಯದ ಬದಲಾವಣೆಯ ಮೈಲಿಗಲ್ಲಾಗಬಹುದು. ಸಮುದಾಯ ಜಾಗೃತವಾಗಿ ಸ್ಥಳೀಯ ಕಮಿಟಿಗಳು ಮೌಲಾನಾ ಆಝಾದ್ ಮಾದರಿ ಶಾಲೆಗಳನ್ನು ಉಪಯೋಗಿಸಿಕೊಂಡು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಮರು ಸೇರ್ಪಡೆಗೆ ಪ್ರಯತ್ನ ಮಾಡಬೇಕು. ಅಲ್ಲದೆ ಅಂತಹ ಮಕ್ಕಳ ಪೋಷಕರಿಗೆ ಈ ಶಾಲೆಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಹಾಗೂ ಉಚಿತ ಶಿಕ್ಷಣದ ಬಗ್ಗೆ ಮಾಹಿತಿ ಒದಗಿಸಿ ಸರಕಾರದ ಈ ಯೋಜನೆಯನ್ನು ಸಾಕಾರ ಗೊಳಿಸಬೇಕಿದೆ.


ಭಾರತದಲ್ಲಿ ಮುಸ್ಲಿಮರ ಸ್ಥಿತಿಗತಿ ಕುರಿತು ಅಧ್ಯಯನ ಮಾಡಲು ಅಂದಿನ ಯುಪಿಎ ಸರಕಾರ 2005ರಲ್ಲಿ ನ್ಯಾ.ರಾಜೇಂದ್ರ ಸಾಚಾರ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದು ರಚಿಸಿತ್ತು. ಸದರಿ ಸಮಿತಿಯು ‘‘ದೇಶದಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿ ತುಂಬಾ ಗಂಭೀರವಾಗಿದೆ, ದೇಶದಲ್ಲಿಯೇ ಅತೀ ಹೆಚ್ಚು ಶಾಲೆ ಬಿಡುವ ಮಕ್ಕಳ ಸಂಖ್ಯೆ ಮುಸ್ಲಿಂ ಸಮುದಾಯದಲ್ಲಿದೆ, ಉನ್ನತ ಶಿಕ್ಷಣ ಪಡೆಯುವ ಮಕ್ಕಳ ಸಂಖ್ಯೆ ಇತರ ಸಮುದಾಯದ ಮಕ್ಕಳ ಸಂಖ್ಯೆಗಿಂತ ಅತೀ ಕಡಿಮೆಯಿದೆ’’ ಎಂದು ವರದಿ ನೀಡಿದೆ. ಅದರ ಜೊತೆಗೆ ನ್ಯಾ. ರಾಜೇಂದ್ರ ಸಾಚಾರ ಸಮಿತಿಯು ಇದು ಒಂದು ಸಮುದಾಯದ ಸಮಸ್ಯೆಯಲ್ಲಿ ದೇಹದ ಒಂದು ಭಾಗ ಊನವಾಗಿದ್ದರೆ, ಅದು ಇಡೀ ದೇಹಕ್ಕೆ ಹೇಗೆ ನೋವು ಕೊಡುತ್ತದೆಯೋ ಅದೇ ರೀತಿ ಮುಸ್ಲಿಂ ಸಮುದಾಯದ ಈ ಸಮಸ್ಯೆ ಇಡೀ ದೇಶದ ಬೆಳವಣಿಗೆಗೆ ಪೂರಕವಾಗುವುದಿಲ್ಲ ಎಂದು ಹೇಳಿತ್ತು, ಅದಕ್ಕಾಗಿ ಹಲವಾರು ಯೋಜನೆಗಳನ್ನು ಶಿಫಾರಸು ಮಾಡಿ ಸೂಚಿಸಿತ್ತು. ಅಂತಹ ಹಲವು ಯೋಜನೆಗಳಲ್ಲಿ ಮುಸ್ಲಿಮರು ವಾಸಿಸುವ ಸ್ಥಳೀಯ ಪ್ರದೇಶದಲ್ಲಿ ಶಾಲಾ-ಕಾಲೇಜುಗಳನ್ನು ಸ್ಥಾಪನೆ ಮಾಡಬೇಕೆಂದು ಮಾಡಿರುವ ಶಿಫಾರಸು ಕೂಡಾ ಇದೆ.

ಅದರಂತೆ, ಭಾರತ ಸರಕಾರವು ಕರ್ನಾಟಕ ರಾಜ್ಯದ 3 ಬ್ಲಾಕ್‌ಗಳನ್ನು (ಚಿತಾಪುರ, ಬೀದರ್ ಮತ್ತು ಹುಮನಾಬಾದ್‌ತಾಲೂಕುಗಳು) ಮತ್ತು 8 ಪಟ್ಟಣಗಳನ್ನು (ಜಮಖಂಡಿ, ಬಾಗಲಕೋಟೆ, ರಾಯಚೂರು, ಸಿಂಧನೂರು, ಗಂಗಾವತಿ, ಕೊಪ್ಪಳ, ಹೊಸಪೇಟೆ ಮತ್ತು ಹಾವೇರಿ-ಪಟ್ಟಣ ಪಂಚಾಯತ್‌ಗಳು ಅಥವಾ ನಗರಸಭೆಗಳು) ಶೇ. 25ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ಪ್ರದೇಶಗಳನ್ನು ಗುರುತಿಸಿ ಬಹುವಲಯ ಅಭಿವೃದ್ಧಿ ಯೋಜನೆಯನ್ನು (ಎಂ.ಎಸ್.ಡಿ.ಪಿ.) 11ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಜಾರಿಗೊಳಿಸಿದೆ. ಬಹುವಲಯ ಅಭಿವೃದ್ಧಿ ಯೋಜನೆಯು ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮತ್ತು ಗುರುತಿಸಲ್ಪಟ್ಟ ಅಲ್ಪಸಂಖ್ಯಾತರ ಕೇಂದ್ರಿಕೃತ ಪ್ರದೇಶಗಳಲ್ಲಿ ಅಸಮತೋಲನವನ್ನು ಕಡಿಮೆ ಮಾಡುವ ಗುರಿಯೊಂದಿಗೆ ಶಿಕ್ಷಣ, ಕೌಶಲ್ಯ, ಆರೋಗ್ಯ, ನೈರ್ಮಲ್ಯ, ವಸತಿ ಮತ್ತು ಕುಡಿಯುವ ನೀರು ಇತ್ಯಾದಿ ಸೌಲಭ್ಯ ಒದಗಿಸುವ ಯೋಜನೆಯಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಬಹುವಲಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಹಲವು ಶಾಲಾ-ಕಾಲೇಜುಗಳನ್ನು ಈಗಾಗಲೇ ಸ್ಥಾಪನೆ ಮಾಡಲಾಗಿದೆ, ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರವಿದ್ದಾಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 200 ಮೌಲಾನಾ ಆಝಾದ್ ಮಾದರಿ ಶಾಲೆಗಳನ್ನು 6ನೇ ತರಗತಿಯಿಂದ 10ನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾರಂಭಿಸಲಾಗಿದೆ. ಈ ಶಾಲೆಗಳನ್ನು ಬಹುತೇಕ ರಾಜ್ಯದ ಪ್ರತಿಯೊಂದು ತಾಲೂಕುಗಳಲ್ಲಿ ಒಂದರಿಂದ ಮೂರು-ನಾಲ್ಕು ಶಾಲೆಗಳನ್ನು ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ನಗರ ಅಥವಾ ಪಟ್ಟಣ, ಹೋಬಳಿ ಪ್ರದೇಶದಲ್ಲಿ ಪ್ರಾರಂಭಿಸಲಾಗಿದೆ. ಸದರಿ ಶಾಲೆಗಳಲ್ಲಿ ಪ್ರತಿ ತರಗತಿಗೆ 60 ಮಕ್ಕಳನ್ನು ಪ್ರವೇಶ ಪಡೆಯಲು ಅವಕಾಶ ನೀಡಿದ್ದು, ಅವುಗಳಲ್ಲಿ ಶೇ. 75ರಷ್ಟು ಸೀಟುಗಳನ್ನು ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಬೌದ್ಧ ಹಾಗೂ ಜೈನ ವಿದ್ಯಾರ್ಥಿಗಳಿಗೆ ಹಾಗೂ ಶೇ. 25ರಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಪ್ರವೇಶ ನೀಡುವ ಬಗ್ಗೆ ಸೂಚಿಸಲಾಗಿದೆ. ಬಹುತೇಕ ಬಡ ಮಕ್ಕಳು ಈ ಶಾಲೆಗಳಿಗೆ ಪ್ರವೇಶ ಪಡೆದು ತಮ್ಮ ಭವಿಷ್ಯ ರೂಪಿಸಲು ಅನುಕೂಲವಾಗಿದೆ. ಸರಕಾರ ಈಗ ಮಂಜೂರು ಮಾಡಿರುವ 200 ಶಾಲೆಗಳ ಜೊತೆಗೆ ಬೇಡಿಕೆಗನುಸಾರವಾಗಿ ಇನ್ನೂ ಹೆಚ್ಚಿನ ಶಾಲೆಗಳನ್ನು ಮಂಜೂರು ಮಾಡುವ ಬಗ್ಗೆ ಯೋಚಿಸಬೇಕಾಗಿದೆ.

ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಮಕ್ಕಳು ಈ ಮೌಲಾನಾ ಆಝಾದ್‌ಮಾದರಿ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿರುವುದು ಕಂಡು ಬಂದಿದೆ. ಅದೇ ದಕ್ಷಿಣ ಕರ್ನಾಟಕದ ಕರಾವಳಿ ಭಾಗದಲ್ಲಿ ಗಣನೀಯವಾಗಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಮೌಲಾನಾ ಆಝಾದ್ ಮಾದರಿ ಶಾಲೆಗಳಿಗೆ ಸುಮಾರು 700 ಹುದ್ದೆಗಳನ್ನು ಸೃಜಿಸಿ ಮಂಜೂರು ಮಾಡಿ ಆದೇಶಿಸಲಾಗಿದೆ, ಅದರಂತೆ ಹುದ್ದೆಗಳನ್ನು ಸಹ ಭರ್ತಿ ಮಾಡಲಾಗುತ್ತಿದೆ. ಈ ಶಾಲೆಗಳು ಮುಸ್ಲಿಂ ಸಮುದಾಯದ ಮಕ್ಕಳಲ್ಲಿ ಹೊಸ ಬೆಳಕನ್ನು ಮೂಡಿಸಿವೆ ಎಂದರೆ ತಪ್ಪಾಗಲಾರದು. ರಾಜ್ಯಾದ್ಯಂತ ಇರುವ ಮೌಲಾನಾ ಆಝಾದ್ ಮಾದರಿ ಶಾಲೆಗಳಲ್ಲಿ ಈಗ ಇತರ ಖಾಸಗಿ ಶಾಲೆಗಳಿಂದ ಮಕ್ಕಳು ವರ್ಗಾವಣೆಯ ಮೂಲಕ ಪ್ರವೇಶ ಪಡೆಯುವ ಪ್ರಕ್ರಿಯೆ ಚುರುಕಾಗಿ ನಡೆಯುತ್ತಿರುವುದು ಮೌಲಾನಾ ಆಝಾದ್ ಮಾದರಿ ಶಾಲೆಗಳ ಮಹತ್ವ ತಿಳಿಯಬಹುದಾಗಿದೆ. ಇನ್ನು ಕೆಲವೊಂದು ಮೌಲಾನಾ ಆಝಾದ್ ಮಾದರಿ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ದುಸ್ತರವಾಗಿದೆ ಎಂದೇ ಹೇಳಬಹುದು ಮತ್ತು ಕೆಲವು ಕಡೆ ಇಂತಹ ಶಾಲೆಗಳ ಬೇಡಿಕೆ ಹೆಚ್ಚಾಗಿದೆ. ಮೌಲಾನಾ ಆಝಾದ್ ಮಾದರಿ ಶಾಲೆಗಳನ್ನು ತಮ್ಮ ಪ್ರದೇಶಕ್ಕೆ ಬೇಕೆಂಬ ಬೇಡಿಕೆಯೊಂದಿಗೆ ಹಲವಾರು ಸಾಮಾಜಿಕ ಸಂಘಟನೆಗಳು ಸರಕಾರಕ್ಕೆ/ಇಲಾಖೆಗೆ ಮನವಿ ಸಲ್ಲಿಸುವ ಪ್ರಕ್ರಿಯೆಯೂ ನಡೆದಿರುವುದು ತಿಳಿಯಬಹುದಾಗಿದೆ. ಈ ಶಾಲೆಗಳಲ್ಲಿ ಕನ್ನಡ, ಇಂಗ್ಲಿಷ್, ಉರ್ದು ಹಾಗೂ ಹಿಂದಿ ಭಾಷೆಯನ್ನು ಕಲಿಸಲಾಗುತ್ತದೆ. ಮುಸ್ಲಿಂ ಮಕ್ಕಳಿಗೆ ಉರ್ದು ಒಂದು ಭಾಷೆಯಾಗಿ ಕಲಿಯಲು ಅವಕಾಶ ಮಾಡಿಕೊಡಲಾಗಿದೆ. ಸರಕಾರಿ ಉರ್ದು ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ, ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಾ ಬಂದಿರುವುದು ಕಾಣಬಹುದಾಗಿತ್ತು. ಅದೇ ರೀತಿ ಬಹುತೇಕ ಕಡೆ ಸರಕಾರಿ ಉರ್ದು ಮಾಧ್ಯಮ ಶಾಲೆಗಳನ್ನು ಮುಚ್ಚಲಾಗಿದೆ. ಇನ್ನೂ ಕೆಲವು ಕಡೆ ಮುಚ್ಚುಗಡೆಯಾಗಬಹುದಾದಂತಹ ಸರಕಾರಿ ಉರ್ದು ಮಾಧ್ಯಮ ಶಾಲೆಗಳಲ್ಲಿ ಈ ಮೌಲಾನಾ ಆಝಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ.

ಮೌಲಾನಾ ಆಝಾದ್ ಮಾದರಿ ಶಾಲೆಗಳಿಗೆ ಸ್ವಂತ ಕಟ್ಟಡಗಳನ್ನು ಬಹುವಲಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಬರುವ ಪ್ರದೇಶಗಳಲ್ಲಿ ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಕಟ್ಟಿಸಲಾಗಿದೆ ಮತ್ತು ಇತರ ಪ್ರದೇಶಗಳಲ್ಲಿ ಕರ್ನಾಟಕ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಕಟ್ಟಿಸಲಾಗುತ್ತಿದೆ. ಅಲ್ಲದೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಹತ್ತರ ಕಾರ್ಯಗಳಲ್ಲಿ ಮೌಲಾನಾ ಆಝಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸುವುದು ಒಂದಾಗಿದೆ, ಅಲ್ಲದೆ ಅವುಗಳ ಉತ್ತಮ ನಿರ್ವಹಣೆಗೆ ನಿರಂತರ ಪ್ರಯತ್ನ ಮಾಡಲಾಗುತ್ತಿದೆ, ಮಕ್ಕಳ ಪ್ರವೇಶಕ್ಕೆ ಸಾಕಷ್ಟು ಪ್ರಚಾರ ಮಾಡಲಾಗುತ್ತಿದೆ. ಈ ಶಾಲೆಗಳು ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶೈಕ್ಷಣಿಕ ಭವಿಷ್ಯದ ಬದಲಾವಣೆಯ ಮೈಲಿಗಲ್ಲಾಗಬಹುದು. ಸಮುದಾಯ ಜಾಗೃತವಾಗಿ ಸ್ಥಳೀಯ ಕಮಿಟಿಗಳು ಮೌಲಾನಾ ಆಝಾದ್ ಮಾದರಿ ಶಾಲೆಗಳನ್ನು ಉಪಯೋಗಿಸಿಕೊಂಡು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಮರು ಸೇರ್ಪಡೆಗೆ ಪ್ರಯತ್ನ ಮಾಡಬೇಕು. ಅಲ್ಲದೆ ಅಂತಹ ಮಕ್ಕಳ ಪೋಷಕರಿಗೆ ಈ ಶಾಲೆಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಹಾಗೂ ಉಚಿತ ಶಿಕ್ಷಣದ ಬಗ್ಗೆ ಮಾಹಿತಿ ಒದಗಿಸಿ ಸರಕಾರದ ಈ ಯೋಜನೆಯನ್ನು ಸಾಕಾರ ಗೊಳಿಸಬೇಕಿದೆ. ಯಾವುದೇ ಒಂದು ಸಮುದಾಯ ಅಭಿವೃದ್ಧಿ ಹೊಂದಲು ಕೇವಲ ಸರಕಾರದ ಪ್ರಯತ್ನದಿಂದ ಮಾತ್ರ ಸಾಧ್ಯವಿಲ್ಲ, ಸಮುದಾಯ ಕೂಡ ಸಹಕರಿಸಿ ಕೈಜೋಡಿಸಬೇಕಿದೆ. ಸರಕಾರ ಯೋಜನೆಗಳನ್ನು ಮಾತ್ರ ರೂಪಿಸಬಹುದು, ಆದರೆ ಯೋಜನೆಯ ಉಪಯೋಗ ಪಡೆಯುವುದು ಸಮುದಾಯದ ಜವಾಬ್ದಾರಿ ಎಂದೇ ಭಾವಿಸಬೇಕು.

Writer - ಡಾ. ರಝಾಕ ಉಸ್ತಾದ, ರಾಯಚೂರು

contributor

Editor - ಡಾ. ರಝಾಕ ಉಸ್ತಾದ, ರಾಯಚೂರು

contributor

Similar News