ವಿಜಯಪುರ ವ್ಯಾಪ್ತಿಯಲ್ಲಿ ಶಬ್ದ: ಅಧ್ಯಯನಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

Update: 2021-09-05 12:05 GMT
 ಶಶಿಕಲಾ ಜೊಲ್ಲೆ

ಬೆಂಗಳೂರು, ಸೆ. 5: ವಿಜಯಪುರ ನಗರ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೇಳಿಬಂದಿರುವ ದೊಡ್ಡ ಶಬ್ದದ ಬಗ್ಗೆ ಸೂಕ್ತ ಅಧ್ಯಯನ ನಡೆಸಿ ವರದಿ ನೀಡಲು ಭೂರ್ಗರ್ಭ ಶಾಸ್ತ್ರಜ್ಞರು ಹಾಗೂ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದ ವಿಪತ್ತು ನಿರ್ವಹಣಾ ಘಟಕಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ, ಇನ್ನು, ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಬೆಂಗಳೂರಿನಿಂದ ವಿಪತ್ತು ನಿರ್ವಹಣಾ ತಂಡ ವಿಜಯಪುರಕ್ಕೆ ಆಗಮಿಸಲಿದೆ ಎಂದು ತಿಳಿಸಿದರು.

ಶನಿವಾರ ರಾತ್ರಿ 11:47ರ ಸುಮಾರಿಗೆ ವಿಜಯಪುರ ನಗರ, ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ, ತಾಳಿಕೋಟೆ, ಮುದ್ದೇಬಿಹಾಳ ತಾಲೂಕಿನ ಹಲವು ಕಡೆಗಳಲ್ಲಿ ಭೂಕಂಪನ ಮಾದರಿಯಲ್ಲಿ ದೊಡ್ಡ ಶಬ್ದ ಕೇಳಿದೆ. ಈ ಹಿನ್ನೆಲೆಯಲ್ಲಿ ಭಯಭೀತರಾದ ಜನರು ರಾತ್ರಿ ಮನೆಯ ಹೊರಗೆ ಬಂದು ಕುಳಿತಿರುವ ಬಗ್ಗೆ ವಿಜಯಪುರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಕ್ಷಣ ದೂರವಾಣಿ ಕರೆ ಮಾಡಿ ಚರ್ಚಿಸಿದ್ದೇನೆ ಎಂದರು.

ಅಲ್ಲದೆ, ಭಾರಿ ಶಬ್ದದಿಂದ ಜನರು ಭಯಭೀತರಾಗುವುದು ಬೇಡ, ಸರಕಾರ ಈಗಾಗಲೇ ಜಿಲ್ಲಾಡಳಿತ ಹಾಗೂ ಎಲ್ಲಾ ತಾಲೂಕು ಅಧಿಕಾರಿಗಳಿಗೆ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸೂಚಿಸಿದೆ. ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಯಾವುದೇ ರೀತಿಯ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News