ಆದಾಯ ತೆರಿಗೆ ಇಲಾಖೆಯ ಕಚೇರಿ ಕಟ್ಟಡಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ

Update: 2021-09-05 18:37 GMT

ಬೆಂಗಳೂರು, ಸೆ. 5: ಆದಾಯ ತೆರಿಗೆ ಇಲಾಖೆಯ ಕಚೇರಿ ಕಟ್ಟಡಕ್ಕೆ ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಂಕುಸ್ಥಾಪನೆ ನೆರವೇರಿಸಿದರು.

ರವಿವಾರ ಇಲ್ಲಿನ ಇನ್ ಫ್ಯಾಂಟ್ರಿ ರಸ್ತೆಯ ನಂ.4, 5, ಮತ್ತು 6ರ ನಿವೇಶನದಲ್ಲಿ ಆದಾಯ ತೆರಿಗೆ ಇಲಾಖೆಯ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಅದೇ ಸ್ಥಳದಲ್ಲಿ ಶಿಲಾನ್ಯಾಸದ ಫಲಕವನ್ನೂ ಅನಾವರಣ ಮಾಡಿದರು. ನೂತನವಾಗಿನಿರ್ಮಾಣವಾಗಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿ ಕಟ್ಟಡವು ನೆಲಮಹಡಿ ಮತ್ತು 18 ಮಹಡಿಗಳನ್ನು ಮತ್ತು ನೆಲಮಾಳಿಗೆಯಲ್ಲಿ ವಾಹನ ನಿಲುಗಡೆಯ ಸೌಲಭ್ಯ ಒಳಗೊಂಡಿರುತ್ತದೆ.

ಕಟ್ಟಡವು ಗರಿಷ್ಠ ನೈಸರ್ಗಿಕ ಬೆಳಕನ್ನು ಬಳಸಿಕೊಳ್ಳುತ್ತದೆ. ಈ ಕಟ್ಟಡವು ವಿದ್ಯುತ್ ಉತ್ಪಾದನೆಗೆ ಸೌರ ಫಲಕಗಳನ್ನು ಒಳಗೊಂಡಿರುತ್ತದೆ ಮತ್ತು ಮಳೆ ನೀರು ಕೊಯ್ಲು ವ್ಯವಸ್ಥೆಯಿಂದ ವಿನ್ಯಾಸಿತವಾಗಿದೆ. ಎರಡು ಕೊಳಾಯಿ ವ್ಯವಸ್ಥೆಯೊಂದಿಗೆ ಮರುಬಳಕೆಯ ನೀರನ್ನು ಕೈತೋಟಕ್ಕೆ ಬಳಸಲಾಗುತ್ತದೆ. ಮ್ಯಾಗ್ನೆಟಿಕ್ ಫಿಲ್ಟರ್ ಸಹಿತವಾದ ಕೇಂದ್ರೀಕೃತ ವಾಯು ಸ್ವಚ್ಛತೆ ವ್ಯವಸ್ಥೆ, ಮತ್ತು ಯುವಿ-ಕಿರಣ ಕ್ರಿಮಿನಾಶಕವನ್ನು ಒಳಗೊಂಡಿದೆ. ಕಟ್ಟಡವನ್ನು ಸಿಪಿಡಬ್ಲ್ಯುಡಿಯ ಬೆಂಗಳೂರು ಯೋಜನಾ ವೃತ್ತ ನಿರ್ಮಿಸುತ್ತದೆ.

ಈ ಸುಸಜ್ಜಿತ ಕಟ್ಟಡದಲ್ಲಿ ಸಾರ್ವಜನಿಕರ ಕುಂದುಕೊರತೆಯನ್ನು ಆದ್ಯತೆಯ ಮೇಲೆ ನಿವಾರಿಸಲು ಪ್ರತ್ಯೇಕವಾದ ಸಾರ್ವಜನಿಕ ಸಂಪರ್ಕ ಕಚೇರಿ ಮತ್ತು ತೆರಿಗೆ ಪಾವತಿದಾರರಿಗೆ ಸರದಿಗಾಗಿ ಕಾದು ಕುಳಿತುಕೊಳ್ಳುವ ಆವರಣವೂ ಇರುತ್ತದೆ. ಇದು ಯಾವುದೇ ತೊಡಕು ರಹಿತ ತೆರಿಗೆದಾರರ ಸೇವೆಗಳನ್ನು ಒದಗಿಸಲು ಆದಾಯಕರ ಸೇವಾ ಕೇಂದ್ರವನ್ನು ಹೊಂದಿರುತ್ತದೆ. ಕೇಂದ್ರ ಸ್ಥಾನದಲ್ಲಿರುವ ಈ ಕಚೇರಿ ಕಟ್ಟಡವು ತೆರಿಗೆದಾರ ಸ್ನೇಹಿಯಾಗಿದೆ. ಕಟ್ಟಡದ ವಿನ್ಯಾಸ ಮತ್ತು ಜಾಗದ ಹಂಚಿಕೆಯು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅನುಕೂಲಕರವಾದ ಕಾರ್ಯ ವಾತಾವರಣವನ್ನು ಒದಗಿಸುತ್ತದೆ ಎಂದು ತಿಳಿಸಲಾಗಿದೆ.

ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್, ತರುಣ್ ಬಜಾಜ್, ಸಿಬಿಡಿಟಿಯ ಅಧ್ಯಕ್ಷ ಜೆ.ಬಿ.ಮೊಹಾಪಾತ್ರ ಮತ್ತು ಸಿಬಿಐಸಿಯ ಅಧ್ಯಕ್ಷ ಎಂ.ಅಜಿತ್ ಕುಮಾರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. 

ಪ್ರತಿಕ್ರಿಯೆಗೆ ನಿರಾಕರಣೆ: ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ವಿಷಯಗಳನ್ನು ಮಾಧ್ಯಮ ಪ್ರತಿನಿಧಿಗಳು ಪ್ರಸ್ತಾಪಿಸಿದರೂ ಅದನ್ನು ಕೇಳಿಸಿಕೊಳ್ಳದೆ ಕಾರ್ಯಕ್ರಮ ಸ್ಥಳದಿಂದ ಸಚಿವೆ ನಿರ್ಮಲಾ ಸೀತರಾಮನ್ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News