ಚಿಕ್ಕಮಗಳೂರು: ತರೀಕೆರೆ ಪುರಸಭೆ ಚುನಾವಣೆ ಫಲಿತಾಂಶ; ಕಾಂಗ್ರೆಸ್ ಗೆ ಭರ್ಜರಿ ಗೆಲುವು

Update: 2021-09-06 08:04 GMT

​ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ಪುರಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಹೊರಬಿದ್ದಿದ್ದು, 23 ವಾರ್ಡ್ ಗಳ ಪೈಕಿ 15 ವಾರ್ಡ್ ಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.

ಬಿಜೆಪಿ ಶಾಸಕ ಡಿ.ಎಸ್.ಸುರೇಶ್ ಅವರ ಕ್ಷೇತ್ರವಾಗಿರುವ ತರೀಕೆರೆ ಪಟ್ಟಣದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಹಾಲಿ ಶಾಸಕ ಸುರೇಶ್ ಹಾಗೂ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.

ತರೀಕೆರೆ ಪುರಸಭೆಯ 23 ಸ್ಥಾನಗಳ ಪೈಕಿ ಕಳೆದ ಆ.3ರಂದು 22 ವಾರ್ಡುಗಳಿಗೆ ಚುನಾವಣೆ ಚುನಾವಣೆ ನಡೆದಿತ್ತು. 1 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು.

ಸೋಮವಾರ 22 ವಾರ್ಡ್ ಗಳ ಪೈಕಿ 15 ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದುಕೊಂಡರೆ ಬಿಜೆಪಿ ಕೇವಲ 1 ಸ್ಥಾನದಲ್ಲಿ ಗೆಲುವು ದಾಖಲಿಸಿದೆ. 7 ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ತರೀಕೆರೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಭದ್ರಕೋಟೆಯಾಗಿದ್ದರೂ ತರೀಕೆರೆ ಪುರಸಭೆ ಈ ಹಿಂದಿನಿಂದಲೂ ಕಾಂಗ್ರೆಸ್ ಅಧಿಕಾರ ಹಿಡಿಯುತ್ತಿರುವ ದಾಖಲೆ ಹೊಂದಿದೆ.

ಈ ಬಾರಿ ಪುರಸಭೆ ಅಧಿಕಾರ ಹಿಡಿಯಲು ಬಿಜೆಪಿ ಸರ್ವಪ್ರಯತ್ನ ಮಾಡಿದ್ದರೂ ಅಂತಿಮವಾಗಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿರುವುದರಿಂದ ಬಿಜೆಪಿ ಪಕ್ಷದ ಮುಖಂಡರು ಮುಖಭಂಗ ಅನುಭವಿಸುವಂತಾಗಿದೆ.

ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಕಂಡಿರುವ 7 ಅಭ್ಯರ್ಥಿಗಳು ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿಗಳೆಂದು ತಿಳಿದುಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News