ಶೃಂಗೇರಿ: ನೇಣು ಬಿಗಿದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Update: 2021-09-06 13:29 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಸೆ.6: ಅಜ್ಜಿ, ಮಗಳು, ಮೊಮ್ಮಗಳು ಸೇರಿದಂತೆ ಒಂದೇ ಕುಟುಂಬದ ಮೂವರು ಸಂಬಂಧಿಗಳು ನೇಣುಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ದಾರುಣ ಘಟನೆ ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮಕ್ಕಿಮನೆ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ.

ಆತ್ಮಹತ್ಯೆ ಶರಣಾದವರನ್ನು ಮಕ್ಕಿಮನೆ ಗ್ರಾಮದ ಶಾರದಾ (70), ವೀಣಾ(49) ಹಾಗೂ ಶ್ರಾವ್ಯಾ(16) ಎಂದು ತಿಳಿದು ಬಂದಿದ್ದು, ವೃದ್ಧೆ ಶಾರದಾ ಅವರು ತನ್ನ ಮಗಳು ವೀಣಾ  ಹಾಗೂ ಮೊಮ್ಮಗಳೊಂದಿಗೆ ಮನೆಯ ಒಂದೇ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ.

ಶಾರದಾ ಅವರ ಮಗಳು ವೀಣಾ ಅವರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿದ್ದು, ಮಗಳು ಶ್ರಾವ್ಯಾ ಎಸೆಸೆಲ್ಸಿ ಒದುತ್ತಿದ್ದಳು. ಸೋಮವಾರ ಬೆಳಗ್ಗೆ ಅಂಗನವಾಡಿ ಕೇಂದ್ರದ ಆಯಾ ಪೂರ್ಣಿಮಾ ಎಂಬವರು ಶಿಕ್ಷಕಿ ವೀಣಾ ಅವರಿಗೆ ಎಷ್ಟೇ ಕರೆ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಶಿಕ್ಷಕಿ ವೀಣಾ ಅವರ ಮನೆಗೆ ಬಂದು ಪರಿಶೀಲಿಸಿದ್ದಾರೆ. ಈ ವೇಳೆ ಮನೆಯ ಒಳಗಿನಿಂದ ಚಿಲಕ ಹಾಕಿದ್ದನ್ನು ಗಮನಿಸಿದ ಸ್ಥಳೀಯರು ಎಷ್ಟೇ ಕರೆದರೂ ಪ್ರತಿಕ್ರಿಯೆ ಬಾರದ್ದನ್ನು ಕಂಡು ಮನೆಯ ಹೆಂಚು ತೆಗೆದು ನೋಡಿದಾಗ ವೀಣಾ ಸೇರಿದಂತೆ ತಾಯಿ ಶಾರದಾ, ಮಗಳು ಶ್ರಾವ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಘಟನೆ ನಡೆದ ಸಂದರ್ಭದಲ್ಲಿ ವೀಣಾ ಅವರ ಪತಿ ಸುಧಾಕರ್ ಮನೆಯಲ್ಲಿರಲಿಲ್ಲ ಎಂದು ತಿಳಿದು ಬಂದಿದ್ದು, ಸುದ್ದಿ ತಿಳಿದ ಶೃಂಗೇರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆತ್ಮಹತ್ಯೆಯೋ, ಕೊಲೆಯೊ ಎಂಬ ಬಗ್ಗೆ ತನಿಖೆ ಆರಂಭಿಸಿದ್ದು, ವೀಣಾ ಪತಿ ಸುಧಾಕರ್ ಅವರ ವಿಚಾರಣೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News