ರಾಜ್ಯದ 3 ಪಾಲಿಕೆಗಳಲ್ಲೂ ಬಿಜೆಪಿ ಅಧಿಕಾರ ನಡೆಸಲಿದೆ: ನಳಿನ್‍ಕುಮಾರ್ ಕಟೀಲ್

Update: 2021-09-06 16:20 GMT

ಬೆಂಗಳೂರು, ಸೆ.6: ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗಳಲ್ಲಿ ಭಾರತೀಯ ಜನತಾ ಪಾರ್ಟಿಯೇ ಅಧಿಕಾರ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.

ಬುಧವಾರ ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 3 ಪಾಲಿಕೆಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಲಭಿಸಿದೆ. ಬೆಳಗಾವಿಯಲ್ಲಿ ಮೊದಲ ಬಾರಿಗೆ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿದ್ದು ರಾಷ್ಟ್ರೀಯ ವಿಚಾರಧಾರೆ, ಬಿಜೆಪಿಯ ಉತ್ತಮ ಆಡಳಿತವನ್ನು ಜನರು ಬೆಂಬಲಿಸಿದ್ದಾರೆ ಎಂದು ವಿವರಿಸಿದರು.

ಹುಬ್ಬಳ್ಳಿ-ಧಾರವಾಡದಲ್ಲಿ ನಮ್ಮ ಆಡಳಿತ ಮುಂದುವರಿಯುತ್ತಿದೆ. ಈ ಅವಳಿ ನಗರಕ್ಕೆ ಯಡಿಯೂರಪ್ಪ ಅತಿ ಹೆಚ್ಚು ಅನುದಾನ ನೀಡಿದ್ದರು. ಬೆಳಗಾವಿಯಲ್ಲೂ ನಮ್ಮ ಶಾಸಕರು, ಜನಪ್ರತಿನಿಧಿಗಳ, ಕಾರ್ಯಕರ್ತರ ಪ್ರಯತ್ನ ಫಲ ನೀಡಿದೆ. ಕಲಬುರ್ಗಿ ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಂತಿತ್ತು. ಅಲ್ಲಿಯೂ ಅತಿ ಹೆಚ್ಚು ಸ್ಥಾನ ಗಳಿಸಿದ್ದೇವೆ. ಲೋಕಸಭೆ ಮತ್ತು ಇತರ ಚುನಾವಣೆಗಳಲ್ಲಿ ಬಂದ ಫಲಿತಾಂಶದ ಮಾದರಿ ಮುಂದುವರಿದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ಸರಕಾರದ ಸಾಧನೆಗಳು, ಯಡಿಯೂರಪ್ಪ ಅವರ ಎರಡು ವರ್ಷಗಳ ಆಡಳಿತ, ಬಸವರಾಜ ಬೊಮ್ಮಾಯಿ ಅವರ ಕಲ್ಯಾಣ ಕರ್ನಾಟಕದ ಚಿಂತನೆಯ ಆಡಳಿತದಿಂದ ಜನಾಶೀರ್ವಾದ ನಮಗೆ ಸಿಕ್ಕಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ನೀವು ಟವೆಲ್ ಹಾಕಬೇಡಿ ಎಂಬ ಸ್ಪಷ್ಟ ಸಂದೇಶವನ್ನು ಜನರು ಕಾಂಗ್ರೆಸ್ ಪಕ್ಷದವರಿಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ವಿಫಲರಾಗಿದ್ದಾರೆ ಎಂಬ ಸಂದೇಶ ಹೋಗಬೇಕೆಂಬ ಉದ್ದೇಶದಿಂದ ಸಿದ್ದರಾಮಣ್ಣ ಅವರು ಈ ಬಾರಿ ಹೆಚ್ಚಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿರಲಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಟೀಕಿಸಿದರು.

2 ಸರಕಾರಗಳ ಅಭಿವೃದ್ಧಿ ಕಾರ್ಯಗಳು, ವ್ಯವಸ್ಥಿತ ಚುನಾವಣಾ ತಂತ್ರಗಾರಿಕೆ, ಸಂಘಟನಾ ಪ್ರಯತ್ನ- ನಮಗೆ ಉತ್ತಮ ಫಲ ಕೊಟ್ಟಿದೆ. ಮೂರು ಮಹಾನಗರ ಪಾಲಿಕೆಗಳ ಚುನಾವಣೆಯ ಉಸ್ತುವಾರಿಗಳೂ ಆದ ನಿರ್ಮಲ್ ಕುಮಾರ್ ಸುರಾಣಾ ನೇತೃತ್ವದಲ್ಲಿ ವಿವಿಧ ತಂಡಗಳ ಜನಪ್ರತಿನಿಧಿಗಳ, ಕಾರ್ಯಕರ್ತರ ಪರಿಶ್ರಮದಿಂದ ನಾವು ಗೆಲುವು ಸಾಧಿಸಿದ್ದೇವೆ ಎಂದು ಅವರು ಹೇಳಿದರು.

3 ನಗರಪಾಲಿಕೆಗಳು, ಕೆಲವು ಉಪ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, ಇದಕ್ಕಾಗಿ ಮತದಾರರನ್ನು ಅಭಿನಂದಿಸುವುದಾಗಿ ಹಾಗೂ ನಮಗೆ ಆಶೀರ್ವಾದ ಮಾಡಿದ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.

ಯಡಿಯೂರಪ್ಪ ಮತ್ತು ನಾನು ಜೊತೆಯಾಗಿ ರಾಜ್ಯ ಪ್ರವಾಸ ಮಾಡಲಿದ್ದೇವೆ. ಈ ಕುರಿತ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಯಡಿಯೂರಪ್ಪ ಮಾರ್ಗದರ್ಶನ, ಬಸವರಾಜ ಬೊಮ್ಮಾಯಿ ನೇತೃತ್ವದಡಿ ಪಕ್ಷವು ತಂಡಸ್ಫೂರ್ತಿಯಿಂದ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೂರು ಮಹಾನಗರ ಪಾಲಿಕೆಗಳ ಚುನಾವಣೆಯ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾಣಾ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News