ಪೆಗಾಸಸ್ ಪ್ರಕರಣ: ಸ್ವತಂತ್ರ ತನಿಖೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಮುಂದೂಡಲು ಕೇಂದ್ರದ ಮನವಿಗೆ ಒಪ್ಪಿದ ಸುಪ್ರೀಂ

Update: 2021-09-07 09:58 GMT

ಹೊಸದಿಲ್ಲಿ: ಪೆಗಾಸಸ್ ಸ್ಪೈವೇರ್ ಬಳಸಿ ಹಲವು ಪ್ರಮುಖರ ಮೇಲೆ ಸರಕಾರ ಬೇಹುಗಾರಿಕೆ ನಡೆಸಿದೆ ಎಂಬ ಆರೋಪಗಳ ಕುರಿತಂತೆ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಂದೂಡುವಂತೆ ಕೇಂದ್ರ ಸರಕಾರ ಮಾಡಿದ ಮನವಿಗೆ ಸುಪ್ರೀಂ ಕೋರ್ಟ್ ಇಂದು ಒಪ್ಪಿದೆ.

ಸರಕಾರ ಈ ಪ್ರಕರಣ ಸಂಬಂಧ ಅಫಿಡವಿಟ್ ಸಲ್ಲಿಸಬಹುದು, ಈ ವಿಚಾರದ ಕುರಿತು ಚರ್ಚಿಸಲು ತಮಗೆ ಅಧಿಕಾರಿಗಳ ಜತೆ ಭೇಟಿ ಸಾಧ್ಯವಾಗಿಲ್ಲ, ಅವರನ್ನು ಭೇಟಿಯಾಗಲು ಸಮಯ ಬೇಕಿದೆ, ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ ನಂತರ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು  ವಿಚಾರಣೆಯನ್ನು ಸೆಪ್ಟೆಂಬರ್ 13ಕ್ಕೆ ಮುಂದೂಡಿದೆ.

ಆಗಸ್ಟ್ ತಿಂಗಳಲ್ಲಿ ಸರಕಾರ ಈ ಪ್ರಕರಣ ಸಂಬಂಧ ಎರಡು ಪುಟಗಳ ಅಫಿಡವಿಟ್ ಸಲ್ಲಿಸಿತ್ತಲ್ಲದೆ ಎಲ್ಲಾ ಆರೋಪಗಳನ್ನು ನಿರಾಕರಿಸಿತ್ತು.

"ನೀವು ಈಗಾಗಲೇ ಅಫಿಡವಿಟ್ ಸಲ್ಲಿಸಿದ್ದೀರಲ್ಲವೇ?" ಎಂದು ಆಗಸ್ಟ್ ತಿಂಗಳಲ್ಲಿ ಸಲ್ಲಿಕೆಯಾದ ಅಫಿಡವಿಟ್ ಉಲ್ಲೇಖಿಸಿ ಸಾಲಿಸಿಟರ್ ಜನರಲ್ ಅವರನ್ನು ಮುಖ್ಯ ನ್ಯಾಯಮೂರ್ತಿಗಳು ಕೇಳಿದರು. ಅಗತ್ಯವಿದ್ದರೆ ಇನ್ನೊಂದು ವಿಸ್ತೃತ ಅಫಿಡವಿಟ್ ಸಲ್ಲಿಸುವ ಅವಕಾಶವನ್ನು ನ್ಯಾಯಾಲಯ ಸರಕಾರಕ್ಕೆ ನೀಡಿತ್ತು ಎಂದು ಈ ಸಂದರ್ಭ ಸಾಲಿಸಿಟರ್ ಜನರಲ್ ನೆನಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News