ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಆರೋಪಿ ಪಿಎಸ್ಸೈ ಮಧ್ಯಂತರ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ

Update: 2021-09-07 15:04 GMT
ಅರ್ಜುನ್ 

ಚಿಕ್ಕಮಗಳೂರು, ಸೆ.7: ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದಲಿತ ಯುವಕನಿಗೆ ಠಾಣಾಧಿಕಾರಿ ಮೂತ್ರ ಕುಡಿಸಿದ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪಿಎಸ್ಸೈ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ.

ಗೋಣಿಬೀಡು ಠಾಣೆಯ ಪಿಎಸ್ಸೈ ಆಗಿದ್ದ ಅರ್ಜುನ್ ಎಂಬವರು ಅದೇ ಠಾಣಾ ವ್ಯಾಪ್ತಿಯ ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ಎಂಬವರನ್ನು ಪೊಲೀಸ್ ಠಾಣೆಗೆ ವಿಚಾರಣೆ ನೆಪದಲ್ಲಿ ಕರೆಸಿಕೊಂಡು ಮೂತ್ರ ಕುಡಿಸಿದ್ದರು ಎನ್ನಲಾದ ಪ್ರಕರಣದಲ್ಲಿ ಹುದ್ದೆಯಿಂದ ಅಮಾನತುಗೊಂಡಿದ್ದ ಆರೋಪಿ ಅರ್ಜುನ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ತಲೆಮರೆಸಿಕೊಂಡಿದ್ದರು. ಹೈಕೋರ್ಟ್‍ನಲ್ಲಿ ಜಾಮೀನು ವಜಾ ಆಗುತ್ತಿದ್ದಂತೆ ತನಿಖೆ ನಡೆಸುತ್ತಿದ್ದ ಸಿಐಡಿ ಪೊಲೀಸರ ತಂಡ ಆರೋಪಿ ಅಅರ್ಜುನ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ಬಳಿಕ ಸಿಐಡಿ ಪೊಲೀಸರು ಅರೋಪಿಯನ್ನು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಈ ವೇಳೆ ಆರೋಪಿಯ ವಿಚಾರಣೆಗಾಗಿ ಅರ್ಜುನ್ ಅವರನ್ನು ತಮ್ಮ ವಶಕ್ಕೆ ನೀಡಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಒಂದು ದಿನದ ಮಟ್ಟಿಗೆ ಆರೋಪಿಯನ್ನು  ಸಿಐಡಿ ಪೊಲೀಸರ ವಶಕ್ಕೆ ನೀಡಿದ್ದರು. 1 ದಿನದ ವಿಚಾರಣೆ ಬಳಿಕ ಸಿಐಡಿಯವರು ಆರೋಪಿಯನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಮಧ್ಯೆ ಆರೋಪಿ ಅರ್ಜುನ್ ಅವರು ಮಧ್ಯಂತರ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಶುಕ್ರವಾರ ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಅರ್ಜಿಯ ತೀರ್ಪನ್ನು ಮಂಗಳವಾರ ಕಾಯ್ದಿರಿಸಿತ್ತು. ಮಂಗಳವಾರ ಆರೋಪಿ ಅರ್ಜುನ್ ಅವರು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಜಾಮೀನು ಅರ್ಜಿ ವಿಚಾರಣೆ ವೇಳೆ ಸಂತ್ರಸ್ಥ ದಲಿತ ಯುವಕ ಪುನೀತ್ ಪರವಾಗಿ ಸರಕಾರಿ ಅಭಿಯೋಜಕಿ ಭಾವನಾ ಹಾಗೂ ಖಾಸಗಿ ವಕೀಲ ಪರಮೇಶ್ವರ್ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News