2013ರ ಮುಝಫ್ಫರ್ ನಗರ ದಂಗೆ ಪ್ರಕರಣಗಳು: ಎಂಟು ವರ್ಷಗಳಲ್ಲಿ 1,117 ಆರೋಪಿಗಳ ಖುಲಾಸೆ, ಕೇವಲ ಏಳು ಜನರಿಗೆ ಶಿಕ್ಷೆ!

Update: 2021-09-07 15:16 GMT

 ಮುಝಫ್ಫರ್ ನಗರ,ಸೆ.7: ಉತ್ತರ ಪ್ರದೇಶದ ಮುಝಫ್ಫರ್ ನಗರದಲ್ಲಿ 2013ರಲ್ಲಿ ಸಂಭವಿಸಿದ್ದ ದಂಗೆಗಳ ನಂತರದ ಎಂಟು ವರ್ಷಗಳಲ್ಲಿ ಕೊಲೆ, ಅತ್ಯಾಚಾರ, ದರೋಡೆ, ದಂಗೆ ಮತ್ತು ಹಿಂಸಾಚಾರ ಆರೋಪಗಳಿಗೆ ಸಂಬಂಧಿಸಿದ 97 ಪ್ರಕರಣಗಳಲ್ಲಿ 1,177 ಜನರು ಸಾಕ್ಷಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಂಡಿದ್ದಾರೆ. 

2013,ಆ.27ರಂದು ಜಿಲ್ಲೆಯ ಕಾವಲ್ ಗ್ರಾಮದಲ್ಲಿ ನಡೆದಿದ್ದ ಸಚಿನ್ ಮತ್ತು ಗೌರವ ಎಂಬ ಯುವಕರ ಹತ್ಯೆಗೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಮಾತ್ರ ಏಳು ಜನರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಅದೇ ದಿನ ಆರು ಜನರ ಗುಂಪೊಂದು ಶಾನವಾಝ್ ಎಂಬಾತನನ್ನು ಚೂರಿಗಳಿಂದ ಇರಿದು ಕೊಲೆ ಮಾಡಿತ್ತು. ಇವೆರಡೂ ಪ್ರಕರಣಗಳು ದಂಗೆಗಳಿಗೆ ಕಾರಣವಾಗಿದ್ದವು. ದಂಗೆ ಪ್ರಕರಣಗಳ ತನಿಖೆಗಾಗಿ ರಾಜ್ಯ ಸರಕಾರವು ವಿಶೇಷ ತನಿಖಾ ತಂಡ (ಸಿಟ್)ವೊಂದನ್ನು ರಚಿಸಿತ್ತು.
 
ಪೊಲೀಸರು 1,480 ಜನರ ವಿರುದ್ಧ 510 ಪ್ರಕರಣಗಳನ್ನು ದಾಖಲಿಸಿದ್ದು,175 ಪ್ರಕರಣಗಳಲ್ಲಿ ಆರೋಪಪಟ್ಟಿಗಳನ್ನು ಸಲ್ಲಿಸಿದ್ದರು. ಈ ಎಂಟು ವರ್ಷಗಳಲ್ಲಿ 97 ಪ್ರಕರಣಗಳನ್ನು ನ್ಯಾಯಾಲಯವು ಇತ್ಯರ್ಥಗೊಳಿಸಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ 1,117 ಜನರನ್ನು ಖುಲಾಸೆಗೊಳಿಸಿದೆ. ಈ ಯಾವುದೇ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಮೇಲ್ಮನವಿಯನ್ನು ಸಲ್ಲಿಸಿಲ್ಲ ಎಂದು ಸಿಟ್ ಅಧಿಕಾರಿಯೋರ್ವರು ತಿಳಿಸಿದರು.
ಕಾನೂನು ಕ್ರಮಕ್ಕೆ ರಾಜ್ಯ ಸರಕಾರದ ಅನುಮತಿ ದೊರಕದ ಕಾರಣ ಐಪಿಸಿಯ ಕಲಂ 153ಎ ಮತ್ತು 295ಎ ಅಡಿ ದಾಖಲಾಗಿದ್ದ 20 ಪ್ರಕರಣಗಳಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಲು ಸಿಟ್ ಗೆ ಸಾಧ್ಯವಾಗಿರಲಿಲ್ಲ.
 
ಈ ನಡುವೆ ದಂಗೆಗಳಿಗೆ ಸಂಬಂಧಿಸಿದ 77 ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಉತ್ತರ ಪ್ರದೇಶವು ನಿರ್ಧರಿಸಿದೆ. ಆದರೆ ನ್ಯಾಯಾಲಯವು ರಾಜ್ಯದ ಸಚಿವ ಸುರೇಶ ರಾಣಾ,ಬಿಜೆಪಿ ಶಾಸಕ ಸಂಗೀತ ಸೋಮ್, ಮಾಜಿ ಬಿಜೆಪಿ ಸಂಸದ ಭರತೇಂದು ಸಿಂಗ್ ಮತ್ತು ವಿಹಿಂಪ ನಾಯಕಿ ಸಾಧ್ವಿ ಪ್ರಾಚಿ ಸೇರಿದಂತೆ 12 ಬಿಜೆಪಿ ನಾಯಕರ ವಿರುದ್ಧದ ಪ್ರಕರಣವೊಂದನ್ನು ಮಾತ್ರ ಹಿಂದೆಗೆದುಕೊಳ್ಳಲು ಅನುಮತಿ ನೀಡಿದೆ.

ಪ್ರಸ್ತುತ ದಂಗೆ ಪ್ರಕರಣಗಳ 264 ಆರೋಪಿಗಳು ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಸಿಟ್ ತಿಳಿಸಿದೆ. ಮುಝಫ್ಫರ್ ನಗರ ದಂಗೆಗಳಲ್ಲಿ 60ಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದು,40,000ಕ್ಕೂ ಹೆಚ್ಚಿನ ಜನರು ನಿರ್ವಸಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News