'ಶಿರಾಡಿ ಘಾಟ್' ಹೆದ್ದಾರಿ ಕಾಮಗಾರಿ ಬೇಗ ಪೂರ್ಣ ಗೊಳಿಸಲು ಕೇಂದ್ರ ಸಚಿವ ಗಡ್ಕರಿಗೆ ಸಿಎಂ ಮನವಿ

Update: 2021-09-08 12:48 GMT
photo: twitter@CMofKarnataka
 

ಬೆಂಗಳೂರು, ಸೆ. 8: `ಶಿರಾಡಿ ಘಾಟ್‍ನಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕು' ಎಂದು ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಅವರು, ಕೇಂದ್ರ ಭೂ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬುಧವಾರ ಹೊಸದಿಲ್ಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಶಿರಾಡಿ ಘಾಟ್‍ನಲ್ಲಿ ನಾಲ್ಕು ಪಥಗಳ ಹೆದ್ದಾರಿ ಕಾಮಗಾರಿ ಕೂಡಲೇ ಆರಂಭಿಸಬೇಕು. ಜೊತೆಗೆ ಆದ್ಯತೆ ಮೇಲೆ ಕಾಮಗಾರಿ ಪೂರ್ಣಗೊಳಿಸಬೇಕು. ಸುರಂಗ ಮಾರ್ಗ ನಿರ್ಮಿಸುವ ವಿಚಾರದಲ್ಲಿ ಕನ್ಸಲ್ಟಂಟ್‍ಗಳೊಂದಿಗೆ ಮಾತುಕತೆ ನಡೆದಿದೆ. ಅಲ್ಲದೆ, ರಾಜ್ಯದ ನಾಲ್ಕು ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ' ಎಂದು ಮಾಹಿತಿ ನೀಡಿದರು.

`ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ಪೂರಕವಾದ ಉಪನಗರ(ಸ್ಯಾಟಲೈಟ್) ವರ್ತುಲ ರಸ್ತೆ ಯೋಜನೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಬೇಕು. ಭಾರತ್ ಮಾಲಾ ಪರಿಯೋಜನಾ ಅಡಿಯಲ್ಲಿ ಕೈಗೆತ್ತಿಕೊಂಡಿರುವ ಬೆಂಗಳೂರು ಸುತ್ತಲಿನ ಸಂಚಾರವನ್ನು ಸುಗಮ ಗೊಳಿಸುವ ಉಪನಗರ ವರ್ತುಲ ರಸ್ತೆ ಯೋಜನೆಯ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲು ಹಿಂದಿನ ಸಿಎಂ ಯಡಿಯೂರಪ್ಪ ಅವರೊಂದಿಗೆ ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಸಚಿವರು ಒಪ್ಪಿರುವುದನ್ನು ಸ್ಮರಿಸಿದರು.

ಈ ಸಭೆಯಲ್ಲಿ ಚರ್ಚಿಸಿದಂತೆ ಕರ್ನಾಟಕ ಸರಕಾರವು ಭೂಸ್ವಾಧೀನ ವೆಚ್ಚ 1,560 ಕೋಟಿ ರೂ.ಗಳ ಶೇ.30ರಷ್ಟ ಮೊತ್ತವನ್ನು ಭರಿಸಲು ಸಮ್ಮತಿ ಪತ್ರ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು' ಎಂದು ಕೋರಿದ್ದೇವೆ ಎಂದಬ ಬಸವರಾಜ ಬೊಮ್ಮಾಯಿ, `ಇದೇ ವೇಳೆ ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಗಳು ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಅವುಗಳ ದುರಸ್ತಿಗೆ 184.85 ಕೋಟಿ ರೂ.ಗಳನ್ನು ಶೀಘ್ರವೇ ಬಿಡುಗಡೆ ಮಾಡಬೇಕು' ಎಂದು ಮನವಿ ಮಾಡಲಾಗಿದೆ ಎಂದರು.

`ವಿಜಯಪುರ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿ.ಮೀ 0 ರಿಂದ 80 ಕಿ.ಮೀ ವರೆಗೆ ಅಭಿವೃದ್ಧಿಪಡಿಸುವ ಕಾಮಗಾರಿ ನಡೆಯುತ್ತಿದ್ದು, 80ನೇ ಕಿ.ಮೀ ನಿಂದ 168.90 ಕಿ.ಮೀ. ವರೆಗೆ ಅಭಿವೃದ್ಧಿ ಕಾರ್ಯವನ್ನು ಮುಂದುವರೆಸಲು ಗಡ್ಕರಿಯವರು ಒಪ್ಪಿಗೆ ನೀಡಿದ್ದಾರೆ. ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಲು ತಾತ್ವಿಕ ಅನುಮೋದನೆ ನೀಡಿರುವ ನಾಲ್ಕು ಹೆದ್ದಾರಿಗಳ ಕುರಿತು ಡಿಪಿಆರ್ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಅವುಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಬೇಕು ಎಂದು ಕೋರಲಾಗಿದೆ' ಎಂದು ಬೊಮ್ಮಾಯಿ ತಿಳಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News