ತೂತುಕುಡಿ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ: ಆರೋಪಿ ಪೊಲೀಸರಿಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

Update: 2021-09-08 12:49 GMT

ಹೊಸದಿಲ್ಲಿ: ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸತಾನಕುಲಂ ಎಂಬಲ್ಲಿ ವರ್ತಕ ಜಯರಾಜ್ ಮತ್ತವರ ಪುತ್ರ ಬೆನ್ನಿಕ್ಸ್ ಅವರ ಕಸ್ಟಡಿ ಸಾವು ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಜಾಮೀನು ಮಂಜೂರುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಹಂತದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ವಿನೀತ್ ಸರನ್ ಹಾಗೂ ದಿನೇಶ್ ಮಹೇಶ್ವರಿ ಅವರ ಪೀಠ ಹೇಳಿದೆ.

ರಾಜ್ಯ ಸರಕಾರ ಹೇರಿದ್ದ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ತಮಿಳುನಾಡಿನ ನಾಲ್ಕು ಮಂದಿ ಪೊಲೀಸರು ಜಯರಾಜ್ ಮತ್ತು ಬೆನ್ನಿಕ್ಸ್ ಮೇಲೆ ಬರ್ಬರ ಹಲ್ಲೆಯನ್ನು ಜೂನ್ 18, 2020ರಂದು  ನಡೆಸಿದ್ದರೆಂದು ಆರೋಪಿಸಲಾಗಿತ್ತು. ಇಬ್ಬರೂ ಕೆಲ ದಿನಗಳ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಸಂತ್ರಸ್ತರು ತಮ್ಮನ್ನು ನಿಂದಿಸಿದ್ದರು ಹಾಗೂ ತಾವಾಗಿಯೇ ನೆಲದ ಮೇಲೆ ಹೊರಳಾಡಿ ಗಾಯಗಳುಂಟಾಗುವಂತೆ ಮಾಡಿದ್ದರು ಎಂದು ಪೊಲೀಸರು  ಹೇಳಿಕೊಂಡಿದ್ದರು. ಆದರೆ ಈ ಪ್ರಕರಣದ ಹಲವಾರು ಪ್ರತ್ಯಕ್ಷದರ್ಶಿ ಸಾಕ್ಷಿಗಳು ಹಾಗೂ ಸಂತ್ರಸ್ತರ ಪರ ವಕೀಲರು ಪೊಲೀಸರ ವಾದವನ್ನು ತಿರಸ್ಕರಿಸಿದ್ದರಲ್ಲದೆ ಪೊಲೀಸರು ತಮ್ಮ ತಪ್ಪು ಮರೆಮಾಚಲು ಯತ್ನಿಸುತ್ತಿದ್ದಾರೆಂದು ಹೇಳಿದ್ದರು.

ಮೂಲಗಳ ಪ್ರಕಾರ ಇಬ್ಬರನ್ನೂ ಪೊಲೀಸ್ ಠಾಣೆಯಲ್ಲಿ ಸತತವಾಗಿ ಹಿಂಸಿಸಲಾಗಿತ್ತು ಹಾಗೂ ಲೈಂಗಿಕ ದೌರ್ಜನ್ಯವನ್ನು ಅವರ ಮೇಲೆ ಎಸಗಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ಆಕ್ರೋಶಕ್ಕೂ ಕಾರಣವಾಗಿತ್ತಲ್ಲದೆ ಜನರು ಬೀದಿಗಿಳಿದು ನ್ಯಾಯಕ್ಕಾಗಿ ಆಗ್ರಹಿಸಿದ್ದರು.

ಬೆನ್ನಿಕ್ಸ್ ಅವರು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸತಾನ್‍ಕುಲಂ ಎಂಬಲ್ಲಿ ಸಣ್ಣದೊಂದು ಮೊಬೈಲ್ ಫೋನ್ ಅಂಗಡಿ ಹೊಂದಿದ್ದರು.  ಲಾಕ್‍ಡೌನ್ ಸಡಿಲಿಕೆ ಅವಧಿಯ ನಂತರವೂ ಅಂಗಡಿ ತೆರೆದಿಟ್ಟಿದ್ದಕ್ಕೆ ಪೊಲೀಸರು  ಈ ರೀತಿ ಹಿಂಸಿಸಿದ್ದರೆಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News