ಈಸ್ಟ್ ಇಂಡಿಯಾ ಕಂಪೆನಿಗೂ ಬಿಜೆಪಿಗೂ ಯಾವುದೆ ವ್ಯತ್ಯಾಸವಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ

Update: 2021-09-08 13:38 GMT

ಬೆಂಗಳೂರು, ಸೆ.8: ಈ ಹಿಂದೆ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿ ಮೂಲಕ ನಮ್ಮ ದೇಶಕ್ಕೆ ಬಂದರು. ಅವರಿಗೂ ಬಿಜೆಪಿ ಅವರಿಗೂ ಯಾವುದೇ ವ್ಯತ್ಯಾಸ ಇಲ್ಲ. ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ನಮ್ಮ ದೇಶದ ಎಲ್ಲ ಆಸ್ತಿಯನ್ನು ಉದ್ಯಮಿಗಳಿಗೆ ಮಾರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಬುಧವಾರ ನಗರದಲ್ಲಿ ಆಯೋಜಿಸಲಾಗಿದ್ದ ರಾಜಭವನ ಚಲೋ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ದೇಶದ ಆಸ್ತಿ ಮಾರುತ್ತಿದ್ದಾರೆ. ವಾಜಪೇಯಿ ಅವರ ಕಾಲದಲ್ಲಿ ಅನಂತಕುಮಾರ್ ಸಚಿವರಾಗಿದ್ದಾಗ ಅಶೋಕ ಹೊಟೇಲ್ ಮಾರಿದ್ದರು. ಈಗ ಅವರಿಗಿಂತ ನಾಲ್ಕು ಹೆಜ್ಜೆ ಮುಂದೆ ಹೋಗಿ 25 ವಿಮಾನ ನಿಲ್ದಾಣ, 31 ಬಂದರು, 26 ಸಾವಿರ ಕಿ.ಮೀ ಹೆದ್ದಾರಿ, 400 ರೈಲ್ವೇ ನಿಲ್ದಾಣ, ವಿದ್ಯುತ್ ಎಲ್ಲವನ್ನು ಮಾರುತ್ತಿದ್ದಾರೆ ಎಂದು ಟೀಕಿಸಿದರು.

ನಾವಿಂದು ಬೆಲೆ ಏರಿಕೆ ಹಾಗೂ ದೇಶದ ಆರೂವರೆ ಲಕ್ಷ ಕೋಟಿ ರೂ.ಮೌಲ್ಯದ ಆಸ್ತಿ ಮಾರಲು ಮುಂದಾಗಿರುವ ಕೇಂದ್ರ ಸರಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಕಳೆದ 7 ವರ್ಷಗಳಲ್ಲಿ ಸುಮಾರು 14 ಕೋಟಿ ಜನರನ್ನು ಈ ಸರಕಾರ ನಿರುದ್ಯೋಗಿಗಳನ್ನಾಗಿ ಮಾಡಿದೆ. ವಿದ್ಯಾವಂತರಿಗೆ ಪಕೋಡ ಮಾರಿ ಎಂದು ಹೇಳುತ್ತಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಕಿಡಿಗಾರಿದರು.

ಯುಪಿಎ ಸರಕಾರದ ಅವಧಿಯಲ್ಲಿ ಗ್ಯಾಸ್ ಬೆಲೆ ಸಬ್ಸಿಡಿ ನೀಡಿ 400 ರೂಪಾಯಿಗೆ ನೀಡಲಾಗುತ್ತಿತ್ತು. ಈಗ 900 ರೂ.ಆಗಿದೆ. ಪೆಟ್ರೋಲ್ 105, ಡೀಸೆಲ್ 94 ರೂ. ಆಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ. ರಾಷ್ಟ್ರಮಟ್ಟದಲ್ಲಿ ಈ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಲು ಸೋನಿಯಾ ಗಾಂಧಿ ಸಮಿತಿ ರಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ಮಾಡೋಣ ಎಂದು ರಾಮಲಿಂಗಾರೆಡ್ಡಿ ಕರೆ ನೀಡಿದರು.

ದಿಲ್ಲಿಯಲ್ಲಿ ರೈತರು 9 ತಿಂಗಳಿಂದ ಹೋರಾಟ ಮಾಡುತ್ತಿದ್ದರೂ ಮೋದಿ ಹೋಗಿ ಮಾತನಾಡಿಲ್ಲ. ಬಿಜೆಪಿ ಎಂದರೆ ಭ್ರಷ್ಟ ಜನರ ಪಕ್ಷ, ಬುರುಡೆ ಜನರ ಪಕ್ಷ ಎಂದೇ ಹೇಳಬಹುದು. ಬಿಜೆಪಿಗೆ ಕಣ್ಣು, ಕಿವಿ, ತಲೆ ಏನೂ ಇಲ್ಲ. ಮೋದಿ ಕೋವಿಡ್ ಸಮಯದಲ್ಲಿ ಮಾತೇ ಆಡದೆ, ಗಡ್ಡ ಬೆಳೆಸಿಕೊಂಡಿದ್ದರು. ಬಿಜೆಪಿ ನಾಯಕರು ಬುದ್ಧಿಮಾಂದ್ಯರಂತೆ ವರ್ತಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಮಾಜಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರ ಬಂದಿರುವುದರಿಂದ ಇಂಧನ ಬೆಲೆ ಹೆಚ್ಚಾಗಿದೆ ಎಂದು ಸಚಿವರೊಬ್ಬರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯವರು ಜನಸಂಘದಿಂದ ಬಂದವರು. ಆ ಜನಸಂಘ ಯಾರು ಎಂದರೆ, ಬಂಡವಾಳಶಾಹಿಗಳು. ಕಳ್ಳಸಾಗಾಣೆಯಿಂದ ಬಂದ ಹಣದಿಂದ ಆ ಜನಸಂಘ ಬೆಳೆಯುತ್ತಿತ್ತು ಎಂದರು.

ಕಾಂಗ್ರೆಸ್ 70 ವರ್ಷಗಳಿಂದ ಏನು ಮಾಡಿತು ಎಂದು ಕೇಳುತ್ತಾರೆ. ಇಂದು ಭಾರತ ಪ್ರಮುಖ ರಾಷ್ಟ್ರಗಳಲ್ಲಿ ಒಂದು ಎನ್ನುವ ರೀತಿ ಬೆಳೆದಿದೆ ಎಂದರೆ ಅದಕ್ಕೆ ಕಾಂಗ್ರೆಸ್ ಸರಕಾರಗಳೇ ಕಾರಣ. ಬಿಜೆಪಿ ಸರಕಾರ ಕಾಂಗ್ರೆಸ್ ಕಟ್ಟಿದ್ದನ್ನು ಮಾರುತ್ತಿದೆ. ವಿಮಾನ ನಿಲ್ದಾಣಗಳನ್ನು ಅದಾನಿಗೆ, ಅಂಬಾನಿಗೆ ನೀಡುತ್ತಿದ್ದಾರೆ. ರೈಲ್ವೇ, ಹೆದ್ದಾರಿ ಎಲ್ಲವನ್ನು ಮಾರುತ್ತಿದ್ದಾರೆ. ಈ ಸರಕಾರ ಎಲ್ಲವನ್ನು ಹಾಳು ಮಾಡಿ, ಮುಂದಿನ ಪೀಳಿಗೆಗೆ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಕೋವಿಡ್ ಬಂದಾಗಿನಿಂದ ಜನರ ಸಂಪಾದನೆಗೆ ಪೆಟ್ಟು ಬಿದ್ದಿದೆ. ಇದರಿಂದ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಐಟಿ, ಗಾಮೆರ್ಂಟ್ಸ್, ಹೊಟೇಲ್ ಉದ್ಯಮಗಳಲ್ಲಿ ಕೆಲಸ ಮಾಡುತ್ತಿದ್ದವರು ಕೆಲಸ ಕಳೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅದಾನಿ ಹಾಗೂ ಅಂಬಾನಿ ಅವರ ಆಸ್ತಿ ದುಪ್ಪಟಾಗಿದೆ. ಅಂಬಾನಿ ಆಸ್ತಿ 100 ಬಿಲಿಯನ್‍ನತ್ತ ದಾಪುಗಾಲು ಹಾಕುತ್ತಿದೆ ಎಂದರು.
ಅದಾನಿ ಆಸ್ತಿ ಒಂದು ವರ್ಷದಲ್ಲಿ 13 ಬಿಲಿಯನ್ ಡಾಲರ್‍ನಿಂದ 55 ಬಿಲಿಯನ್ ಡಾಲರ್ ಆಗಿದೆ. ಮೋದಿ ಸಾಹೇಬರು ಇವರ ಮೇಲೆ ಇದ್ದ ಶೇ.30ರಷ್ಟು ಕಾರ್ಪೊರೇಟ್ ಟ್ಯಾಕ್ಸ್ ಅನ್ನು ಶೇ.22ಕ್ಕೆ ಇಳಿಸಿದ್ದಾರೆ. ಪ್ರಪಂಚದಲ್ಲಿ ಅತಿ ಶ್ರೀಮಂತರ ಮೇಲೆ ಕಡಿಮೆ ತೆರಿಗೆ ಇರೋದು ಭಾರತದಲ್ಲಿ. ಅವರ ತೆರಿಗೆ ಇಳಿಸಿದ್ದರಿಂದ ಆಗುವ ನಷ್ಟ ಸರಿದೂಗಿಸಲು ಪೆಟ್ರೋಲ್, ಡೀಸೆಲ್, ಗ್ಯಾಸ್, ದಿನಬಳಕೆ ವಸ್ತುಗಳ ಮೇಲೆ ತೆರಿಗೆ ಹಾಕಿ ವಸೂಲಿ ಮಾಡುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

ಬಿಜೆಪಿ ಸರಕಾರ ದೇಶದ ವಿರುದ್ಧ ಕೆಲಸ ಮಾಡುತ್ತಿದೆ. ಯುಪಿಎ ಸರಕಾರ 2012ರಲ್ಲಿ ತೈಲ ಬಾಂಡ್ ನೀಡಿದ್ದು 1.30 ಲಕ್ಷ ಕೋಟಿ. ಅದನ್ನು ವರ್ಷಕ್ಕೆ 10 ಸಾವಿರ ಕೋಟಿ ಸಾಲ ತೀರಿಸಬೇಕು. ಕೇಂದ್ರ ಸರಕಾರ ಈ ವರ್ಷ ಒಂದರಲ್ಲೇ ಪೆಟ್ರೋಲ್, ಡೀಸೆಲ್ ತೆರಿಗೆಯಿಂದ 4 ಲಕ್ಷ ಕೋಟಿ ಆದಾಯ ಬಂದಿದೆ. ಕಳೆದ ವರ್ಷ ಮೂರುವರೆ ಲಕ್ಷ ಕೋಟಿ. ಇವರು ಸಾಲ ತೀರಿಸುತ್ತಿರುವುದು 10 ಸಾವಿರ ಕೋಟಿ. ಈ ವಿಚಾರದಲ್ಲಿ ಸೂರ್ಯನಿಗೆ ಬೆಳಕು ನೀಡುವ ರೀತಿಯಲ್ಲಿ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತರಾಮನ್ ಸುಳ್ಳು ಹೇಳುತ್ತಿದ್ದಾರೆ. ಅದನ್ನೇ ಮಾಧ್ಯಮಗಳು ಬಿಂಬಿಸುತ್ತಿವೆ ಎಂದು ಅವರು ತಿಳಿಸಿದರು.

ರಾಮ ರಾಜ್ಯ ಭಾರತದಲ್ಲಿ 105 ರೂ.ಇರುವ ಪೆಟ್ರೋಲ್, ರಾವಣನ ರಾಜ್ಯ ಶ್ರೀಲಂಕಾದಲ್ಲಿ 75 ರೂ.ಗೆ ಸಿಗುತ್ತಿದೆ. ಬಾಂಗ್ಲಾದೇಶ 70 ರೂ.ಗೆ ಮಾರುತ್ತಿದ್ದಾರೆ. ನಮ್ಮಿಂದ ಖರೀದಿ ಮಾಡುವ ನೇಪಾಳ ಹಾಗೂ ಭೂತಾನ್ ರಾಷ್ಟ್ರಗಳಲ್ಲಿ 80 ರೂ.ಗೆ ಮಾರುತ್ತಿದ್ದಾರೆ. ಅವರಿಗೇನು ಪೆಟ್ರೋಲ್ ಆಕಾಶದಿಂದ ಸುರಿಯುತ್ತಿದೆಯೇ? ಇವರು ಪಾಕಿಸ್ತಾನದ ಹೆಸರು ಹೇಳಿ ಮತ ಹಾಕಿಸಿಕೊಳ್ಳುತ್ತಾರೆ. ಆ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ 65 ರೂ. ನಮ್ಮಲ್ಲಿ ಬಡವರ ಮೇಲೆ ಗದಾಪ್ರಹಾರ ಮಾಡಿ ಅವರ ರಕ್ತಹೀರುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮತ ಹಾಕಿಸಿಕೊಳ್ಳುವಾಗ ಅಂಬಾನಿ, ಅದಾನಿ ಪಕ್ಕಕ್ಕೆ ಹೋಗುತ್ತಾರೆ. ಆಗ ಹಿಂದೂಗಳು ಬೇಕು ಅಂತಾರೆ. ಆ ಹಿಂದೂಗಳಿಗೆ ಯಾಕೆ ವಿನಾಯಿತಿ ನೀಡುತ್ತಿಲ್ಲ? ಹೀಗಾಗಿ ಇದು ದೇಶದ್ರೋಹಿ ಸರಕಾರ. ಇದರ ವಿರುದ್ಧ ನಾವು ಹೆಚ್ಚು ಹೋರಾಟ ಮಾಡಬೇಕು. ಕಾಂಗ್ರೆಸ್ ಸರಕಾರದಲ್ಲಿ 10 ಪೈಸೆ ಜಾಸ್ತಿಯಾದರೂ ಬೀದಿಗಿಳಿಯುತ್ತಿದ್ದ ಜನ ಬಿಜೆಪಿಗೆ ಮತ ಹಾಕಿದ ಮೇಲೆ ಮಾತಾಡಂಗಿಲ್ಲ, ಬಿಡಂಗಿಲ್ಲ ಎಂಬಂತೆ ಮೌನವಾಗಿದ್ದಾರೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಪ್ರತಿಭಟನೆಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್, ಶಾಸಕ ರಿಝ್ವಾನ್ ಅರ್ಶದ್, ವಿಧಾನ ಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್, ಎಂ.ನಾರಾಯಣಸ್ವಾಮಿ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News