ಬಳಕೆ ಮಾಡದ ಕೆಐಎಡಿಬಿ ಜಮೀನು ವಾಪಸ್: ಸಚಿವ ಮುರುಗೇಶ್ ನಿರಾಣಿ

Update: 2021-09-08 14:28 GMT

ಬೆಂಗಳೂರು, ಸೆ.8: ಕೈಗಾರಿಕಾ ಉದ್ದೇಶಗಳಿಗಾಗಿ ಕೆಐಎಡಿಬಿ ಮೂಲಕ ಪಡೆದ ಜಮೀನನ್ನು ಬಳಕೆ ಮಾಡದಿದ್ದರೆ, 15 ದಿನಗಳಲ್ಲಿ ನೋಟಿಸ್ ನೀಡಲಾಗುವುದು. ಒಂದು ವೇಳೆ ಅನ್ಯ ಉದ್ದೇಶಕ್ಕಾಗಿ ಬಳಸಿದ್ದರೆ ಹಿಂಪಡೆಯಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಯಾವ ಉದ್ದೇಶಕ್ಕೆ ಜಮೀನು ಪಡೆಯಲಾಗಿತ್ತೋ ಅದಕ್ಕೆ ಬಳಸಬೇಕು. ಒಂದು ವೇಳೆ ಬಳಕೆ ಮಾಡದಿದ್ದರೆ, 15 ದಿನದೊಳಗೆ ನೋಟಿಸ್ ನೀಡುವುದಾಗಿ ಹೇಳಿದರು.

ಈಗಾಗಲೇ ಕಳೆದ ಒಂದು ವಾರದಿಂದ ಕೆಲವರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ. 15 ದಿನದಲ್ಲಿ ಸಮರ್ಪಕ ಉತ್ತರ ಬಾರದಿದ್ದರೆ ಮತ್ತೊಂದು ನೋಟಿಸ್ ಕೊಡಲಾಗುವುದು. ಹಾಗೊಂದು ವೇಳೆ ಅದಕ್ಕೂ ಉತ್ತರ ನೀಡದಿದ್ದರೆ ನೀಡಿರುವ ಜಮೀನು ವಾಪಸ್ಸು ಪಡೆಯಲಾಗುವುದು ಎಂದು ಮುರುಗೇಶ್ ನಿರಾಣಿ ತಿಳಿಸಿದರು.

ಕೆಲವರು ಕೈಗಾರಿಕಾ ಉದ್ದೇಶಗಳಿಗಾಗಿ ಪಡೆದಿರುವ ಜಮೀನಿನಲ್ಲಿ ಶೇ.100 ರಷ್ಟು ಕೆಲಸವನ್ನು ಪೂರ್ಣ ಮಾಡಿದ್ದರೆ, ಇನ್ನು ಕೆಲವರು ಶೇ.20 ರಷ್ಟು ಮಾತ್ರ ಕೆಲಸ ಪ್ರಾರಂಭಿಸಿದ್ದಾರೆ. ರಾಜ್ಯದ ಯಾವ ಯಾವ ಕಡೆ ಜಮೀನನ್ನು ಖಾಲಿ ಬಿಡಲಾಗಿದೆ ಎಂಬುದರ ಬಗ್ಗೆ ಇಲಾಖೆ ವತಿಯಿಂದ ಸಮೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದರು.

ಕೆಐಎಡಿಬಿಯಿಂದ ಜಮೀನು ಪಡೆದು ಖಾಲಿ ಬಿಟ್ಟಿರುವ ಪ್ರದೇಶಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲ ಎಂದು ಮುರುಗೇಶ್ ನಿರಾಣಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News