'ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ' ನನ್ನ ಅವಧಿಯಲ್ಲಿ ಸಿದ್ಧವಾಗಿದ್ದರೆ ಸ್ವೀಕರಿಸುತ್ತಿದ್ದೆ; ಸಿದ್ದರಾಮಯ್ಯ

Update: 2021-09-08 14:43 GMT

ಬೆಂಗಳೂರು, ಸೆ. 8: `ಸಾಮಾಜಿಕ, ಆರ್ಥಿಕ ಸಮೀಕ್ಷೆ(ಜಾತಿ ಗಣತಿ) ವರದಿ ಇನ್ನೂ ಹೊರಗೆ ಬಂದಿಲ್ಲ. ಅದರ ಮಾಹಿತಿಯೂ ಸೋರಿಕೆಯಾಗಿಲ್ಲ. ನನಗೆ ಗೊತ್ತಿರುವ ಪ್ರಕಾರ ಜಾತಿ ಗಣತಿ ಸೋರಿಕೆಯೂ ಆಗಿಲ್ಲ. ಅದರಲ್ಲಿ ಏನಿದೆ ಎಂದೂ ಗೊತ್ತಿಲ್ಲ. ನನ್ನ ಅಧಿಕಾರಾವಧಿಯಲ್ಲಿ ಅದು ಸಿದ್ಧವಾಗಿದ್ದರೆ ವರದಿ ಸ್ವೀಕರಿಸುತ್ತಿದ್ದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ಇಲ್ಲಿನ ಚಿತ್ರಕಲಾ ಪರಿಷತ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಜಾತಿ ಜನ ಗಣತಿ ವರದಿಗೆ ವೀರಶೈವ-ಲಿಂಗಾಯತ ಸಮಯದಾಯದ ವಿರೋಧ ವಿಚಾರ ಅವರಿಗೇನಾದ್ರೂ ಗೊತ್ತಾಗಿದೆಯಾ?' ಎಂದು ಪ್ರಶ್ನಿಸಿದರು. ಇದುವರೆಗೆ ಸಾಮಾಜಿಕ-ಆರ್ಥಿಕ ಸಮೀಕ್ಷಾ ವರದಿಯೇ ಸ್ವೀಕಾರವಾಗಿಲ್ಲ. ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿ ಏನು ಎನ್ನುವುದನ್ನು ತಿಳಿದುಕೊಳ್ಳುವುದಕ್ಕಾಗಿ ಸಮೀಕ್ಷೆ ನಡೆಸಲಾಗಿದೆ' ಎಂದು ಸ್ಪಷ್ಟಣೆ ನೀಡಿದರು.

`ಸಾಮಾಜಿಕ ನ್ಯಾಯ ಸಿಗಬೇಕಾದರೆ ದಾಖಲಾತಿಯ ಅಗತ್ಯವಿದೆ. ಯಾವುದೇ ದಾಖಲಾತಿ ಇಲ್ಲದೆ ಸಾಮಾಜಿಕ ನ್ಯಾಯ ನೀಡಲು ಅಸಾಧ್ಯ. ಆ ಉದ್ದೇಶದಿಂದ ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ. ಯಾವ ಜಾತಿ, ಯಾವ ವರ್ಗದ ವಿರುದ್ಧವೂ ನಾವಿಲ್ಲ. ಹೈಕಮಾಂಡ್ ಒಂದು ಸಮಿತಿ ರಚನೆ ಮಾಡಿದ್ದಾರೆ. ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಆಗಿದೆ. ಅವರು ಅಧ್ಯಯನ ಮಾಡಿ ವರದಿ ಕೊಡಲಿ' ಎಂದು ಸಿದ್ದರಾಮಯ್ಯ ತಿಳಿಸಿದರು.

`ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಮೊದಲ ಬಾರಿ ಸಮೀಕ್ಷೆ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಅಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ವರದಿ ಸ್ವೀಕಾರ ಮಾಡಲು ಒಪ್ಪಿಲ್ಲ. ಈಗಲೂ ವರದಿ ಸ್ವೀಕರಿಸಿಲ್ಲ. ವಿಧಾನಸಭೆ ಕಲಾಪದಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸುವ ಸಂಬಂಧ ಮುಂದಿನ ದಿನಗಳಲ್ಲಿ ಆಲೋಚನೆ ಮಾಡುತ್ತೇನೆ' ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News