ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇತಿಹಾಸ ತಿರುಚುವ ಅಂಶಗಳಿಲ್ಲ: ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ

Update: 2021-09-08 15:57 GMT

ಬೆಂಗಳೂರು, ಸೆ.8: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇತಿಹಾಸವನ್ನು ತಿರುಚುವ ಯಾವುದೇ ಅಂಶಗಳಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬುಧವಾರ ನಗರದ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿರುವ ಟಿ.ಜಾನ್ ತಾಂತ್ರಿಕ ಸಂಸ್ಥೆ ಆಯೋಜಿಸಿದ್ದ ಎನ್.ಇ.ಪಿ–2020 ಸಮಾವೇಶದಲ್ಲಿ ಮಾತನಾಡಿದ ಅವರು, ನೂತನ ಶಿಕ್ಷಣ ನೀತಿ ಬಿಜೆಪಿ ನೀತಿ ನಿಲುವುಗಳನ್ನು ಆಧರಿಸಿದೆ ಎಂಬುದು ಸರಿಯಲ್ಲ. ಇತಿಹಾಸವನ್ನು ತಿರುಚುವ ಪಠ್ಯಗಳನ್ನು ನೂತನ ನೀತಿಯಲ್ಲಿ ಅಳವಡಿಸಲಾಗುತ್ತಿದೆ ಎಂಬ ಆರೋಪ ಸರಿಯಲ್ಲ ಎಂದು ಹೇಳಿದರು. 

ಹೊಸ ಶಿಕ್ಷಣ ನೀತಿಯಲ್ಲಿ ಪಠ್ಯ ಕ್ರಮವನ್ನು ಸರಕಾರ ನಿಗದಿಪಡಿಸುವುದಿಲ್ಲ. ಸಂಬಂಧಪಟ್ಟ ವಿಶ್ವವಿದ್ಯಾಲಯಗಳು, ಶಿಕ್ಷಣ ತಜ್ಞರು ಪಠ್ಯಕ್ರಮ ರೂಪಿಸಲಿದ್ದಾರೆ. ಪಠ್ಯದ ಅಂಶಗಳನ್ನು ನಿಗದಿಪಡಿಸಲು ತನ್ನದೇ ಆದ ವ್ಯವಸ್ಥೆಯಿದೆ. ಜತೆಗೆ ಕಲಿಸುವ, ಮೌಲ್ಯ ಮಾಪನ ಮಾಡುವ ವಿಧಾನದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಮೌಲ್ಯ ಮಾಪನವನ್ನು ವರ್ಷದ ಕೊನೆಯಲ್ಲಿ ಮಾಡುವುದಿಲ್ಲ. ಬದಲಿಗೆ ನಿಯಮಿತವಾಗಿ, ನಿರಂತರವಾಗಿ ಮೌಲ್ಯ ಮಾಪನ ನಡೆಯುತ್ತಲೇ ಇರುವ ಅಂಶಗಳನ್ನು ಹೊಸ ನೀತಿಯಲ್ಲಿ ಜಾರಿಗೆ ತರಲಾಗುತ್ತಿದೆ. ಮುಂದಿನ 20 ರಿಂದ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಶೀಲ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕಾಗಿದೆ. ಸಮಾಜದಲ್ಲಿ  ಇರುವ ಎಲ್ಲ ಒಳ್ಳೆಯದನ್ನು ನೀಡುವ, ಪಡೆಯುವ, ಕೈಗಾರಿಕಾ ವಲಯದಲ್ಲಿ ಕೌಶಲ್ಯತೆ ವೃದ್ಧಿಸುವ ಹೀಗೆ ಎಲ್ಲ ವಲಯಗಳಲ್ಲಿರುವ ಅತ್ಯುತ್ತಮವಾದುದ್ದನ್ನು ನೀಡುವ ಉದ್ದೇಶವನ್ನು ಈ ನೀತಿ ಒಳಗೊಂಡಿದೆ ಎಂದು ಅವರು ತಿಳಿಸಿದರು.  ಸಂಪೂರ್ಣವಾಗಿ, ಪರಿಪೂರ್ಣ ಗುಣಮಟ್ಟದ ಶಿಕ್ಷಣವನ್ನು ನೀಡುವ ಗುರಿ ಹೊಂದಲಾಗಿದೆ. ಸವಾರ್ಂಗೀಣ ವ್ಯಕ್ತಿತ್ವವನ್ನು ನಿರ್ಮಿಸುವುದು ಶಿಕ್ಷಣ ನೀತಿಯ ಧ್ಯೇಯವಾಗಿದೆ. ಈಗಿನ ಶಿಕ್ಷಣ ನೀತಿಯಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ವಿಭಾಗಗಳ ನಡುವೆ ಹೊಂದಾಣಿಕೆಯಿಲ್ಲ. ನೂತನ ಶಿಕ್ಷಣ ನೀತಿಯಲ್ಲಿ ಸೂಕ್ತ ಬದಲಾವಣೆಯನ್ನು ತರಲಾಗುತ್ತಿದ್ದು, ಏನನ್ನು ಬೇಕಾದರೂ ಕಲಿಯಬಹುದಾಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು. 

ಟಿ.ಜಾನ್ ತಾಂತ್ರಿಕ ಸಂಸ್ಥೆ ಸೂಕ್ತ ಸಮಯದಲ್ಲಿ ಎನ್.ಇ.ಪಿ ಬಗ್ಗೆ ಸಮ್ಮೇಳನ ನಡೆಸುತ್ತಿದೆ. ಇದು ನಿಜಕ್ಕೂ ಒಳ್ಳೆಯ ಕಾರ್ಯಕ್ರಮ. ಹೊಸ ನೀತಿ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು ರಚನಾತ್ಮಕ, ಸಕಾರಾತ್ಮಕ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದು ಅಶ್ವತ್ಥ ನಾರಾಯಣ ಹೇಳಿದರು. 

ಕಾರ್ಯಕ್ರಮದಲ್ಲಿ ಟಿ.ಜಾನ್ ಗ್ರೂಪ್ ಆಫ್ ಇನ್ಸ್‍ಟಿಟ್ಯೂಟ್ ಅಧ್ಯಕ್ಷ ಡಾ.ಥಾಮಸ್ ಪಿ.ಜಾನ್, ರಾಜ್ಯ ಉನ್ನತ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಎಂ.ಎಚ್.ಆರ್.ಡಿ.ಯ ನಾವೀನ್ಯತೆ ವಿಭಾಗದ ನಿರ್ದೇಶಕ ಡಾ.ಎನ್.ಎಚ್.ಸಿದ್ದಲಿಂಗಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಸುರೇಶ್ ವೇಣುಗೋಪಾಲ್, ಬೆಂಗಳೂರು ವಿವಿ ಉಪ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್, ಜಾನ್ ವಿವಿಯ ಡಾ.ಮೊಹಿತ್ ಗಂಭೀರ್, ಜೈನ್ ವಿವಿಯ ಪ್ರೊ.ರಾಜ್ ಸಿಂಗ್, ಎಐಸಿಟಿಇ ರಿಜಿಸ್ಟ್ರಾರ್ ಡಾ.ಎಸ್.ಎಂ.ಸುರೇಶ್, ಯು.ಜಿ.ಸಿ ಶಿಕ್ಷಣ ಅಧಿಕಾರಿ ಡಾ.ಕೆ.ಸಿ.ಲತಾ ಮತ್ತು ಎಐಸಿಟಿಇ ನಿರ್ದೇಶಕ ಡಾ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News