ವಿದೇಶಿ ಹೂಡಿಕೆಯಲ್ಲಿ ಕರ್ನಾಟಕ ಪ್ರಥಮ: ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ

Update: 2021-09-08 16:59 GMT

ಬೆಂಗಳೂರು, ಸೆ.8: ಪ್ರಸಕ್ತ ಹಣಕಾಸು ವರ್ಷದ ಮೊದಲನೆಯ ತ್ರೈಮಾಸಿಕ (ಎಪ್ರಿಲ್‍ನಿಂದ ಜೂನ್) ದಲ್ಲಿ 62,085 ಕೋಟಿ ರೂ. ವಿದೇಶಿ ನೇರ ಬಂಡವಾಳ ಆಕರ್ಷಿಸಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಅವರು, ಮೊದಲ ತ್ರೈಮಾಸಿಕದಲ್ಲಿ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಪಡೆಯುವ ಮೂಲಕ ನಾವು ಮೊದಲ ಸ್ಥಾನದಲ್ಲಿದ್ದೇವೆ. ದೇಶದ ಒಟ್ಟಾರೆ ವಿದೇಶಿ ಹೂಡಿಕೆಯಲ್ಲಿ ರಾಜ್ಯದ ಪಾಲು ಶೇ.48ರಷ್ಟಿದೆ ಎಂದರು.

2019-2020ರ ಅವಧಿಯಲ್ಲಿ 30,746 ಕೋಟಿ ರೂ.ವಿದೇಶಿ ನೇರ ಬಂಡವಾಳ ಆಕರ್ಷಿಸಿ ರಾಜ್ಯವು ಮೂರನೇ ಸ್ಥಾನದಲ್ಲಿತ್ತು, 2020-21ರ ಅವಧಿಯಲ್ಲಿ 56,884 ಕೋಟಿ ರೂ.ವಿದೇಶಿ ನೇರ ಬಂಡವಾಳ ಆಕರ್ಷಿಸಿ ರಾಜ್ಯವು ಮೂರನೇ ಸ್ಥಾನ ಕಾಯ್ದುಕೊಂಡಿದೆ ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಮತ್ತೊಂದು ಸಂತಸದ ವಿಷಯ ಹಂಚಿಕೊಂಡ ಮುರುಗೇಶ್ ನಿರಾಣಿ, ಕರ್ನಾಟಕ ಉದ್ಯೋಗ ಮಿತ್ರ ದೇಶದ ಅಗ್ರಮಾನ್ಯ ಹೂಡಿಕೆ ಪ್ರಚಾರ ಏಜೆನ್ಸಿಯಾಗಿ ಹೊರಹೊಮ್ಮಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ದೇಶದ ಅಗ್ರಮಾನ್ಯ ಹೂಡಿಕೆ ಪ್ರಚಾರ ಏಜೆನ್ಸಿ: ರಾಜ್ಯದಲ್ಲಿ ಉದ್ಯಮಸ್ನೇಹಿ ಕ್ರಮಗಳ ಜಾರಿ ಮತ್ತು ಉದ್ಯಮಕ್ಕೆ ಮೂಲ ಸೌಕರ್ಯ ಒದಗಿಸುವ ವಿಚಾರದಲ್ಲಿ ಕರ್ನಾಟಕ ಉದ್ಯೋಗ ಮಿತ್ರ, ದೇಶದ  ಅಗ್ರಮಾನ್ಯ ಹೂಡಿಕೆ ಪ್ರಚಾರ ಏಜೆನ್ಸಿಯಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಹೂಡಿಕೆ ಉತ್ತೇಜನ ಮತ್ತು ಪೂರಕ ಸೌಲಭ್ಯ ಒದಗಿಸುವ ಏಜೆನ್ಸಿ "ಇನ್ವೆಸ್ಟ್ ಇಂಡಿಯಾ"ದ ರಾಜ್ಯವಾರು ಐಪಿಎ (ಹೂಡಿಕೆ ಪ್ರಚಾರ ಏಜೆನ್ಸಿ) ಶ್ರೇಯಾಂಕದಡಿ ಕರ್ನಾಟಕ ಉದ್ಯೋಗ ಮಿತ್ರ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಪ್ರದರ್ಶಿಸಿದೆ ಎಂದು ಅವರು ಹೇಳಿದರು.

ದೇಶದ ಒಟ್ಟು 20 ರಾಜ್ಯಗಳ ಸಾಧನೆಯನ್ನು ಪರಿಗಣಿಸಿ ಈ ಶ್ರೇಯಾಂಕ ನೀಡಲಾಗಿದೆ. ಹೂಡಿಕೆ ಉತ್ತೇಜನ ಪ್ರಚಾರಕ್ಕೆ ಸಂಬಂಧಿಸಿದ ಒಟ್ಟು 8 ವಿಭಾಗಗಳ ಪೈಕಿ 4ರಲ್ಲಿ ಕರ್ನಾಟಕ ಉದ್ಯೋಗ ಮಿತ್ರ ಶೇ.100 ಅಂಕಗಳನ್ನು ಗಳಿಸಿದೆ. ಹೂಡಿಕೆ ಯೋಜನೆಗಳ ಗಳಿಕೆ, ಹೂಡಿಕೆ ಯೋಜನೆಗಳಿಗೆ ಸೌಲಭ್ಯ, ಯೋಜನೆ ಜಾರಿ ಬಳಿಕ ಪೂರಕ ನೆರವು ಮತ್ತು ವೆಬ್‍ಸೈಟ್ ನಿರ್ವಹಣೆ ವಿಭಾಗದಲ್ಲಿ ಉದ್ಯೋಗ ಮಿತ್ರ ಪೂಣಾರ್ಂಕ ಗಳಿಸಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.

ಉದ್ಯಮಿಗಳಿಗೆ ಹೂಡಿಕೆ ಅವಕಾಶಗಳು ಹಾಗೂ ಆಯ್ಕೆ ಕುರಿತಂತೆ ಸಮರ್ಪಕ ಮಾಹಿತಿ ಒದಗಿಸುವ ಪ್ರಕ್ರಿಯೆ ಪಾಲಿಸುವ ಜತೆಗೆ, ಹೂಡಿಕೆಗೆ ಪೂರಕ ಸೌಲಭ್ಯ ಒದಗಿಸುವಲ್ಲಿ ಏಜೆನ್ಸಿಯ ಪಾತ್ರ ಗಣನೀಯವಾದುದು. ಇನ್ವೆಸ್ಟ್ ಇಂಡಿಯಾದ ಐಪಿಎ ಶ್ರೇಯಾಂಕದಲ್ಲಿ ರಾಜ್ಯದ ಹೂಡಿಕೆ ಪ್ರಚಾರ ಏಜೆನ್ಸಿಯಾದ ಕರ್ನಾಟಕ ಉದ್ಯೋಗ ಮಿತ್ರ ಅತ್ಯುತ್ತಮ ಶ್ರೇಯಾಂಕ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.
ಕೈಗಾರಿಕೆಗಳ ಸ್ಥಾಪನೆಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿರುವ ರಾಜ್ಯದ ಬಗ್ಗೆ ಹೂಡಿಕೆದಾರರು ಅಚಲ ವಿಶ್ವಾಸ ಇರಿಸಿದ್ದಾರೆ.

ಹೂಡಿಕೆದಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಉದ್ಯಮ ಆರಂಭಕ್ಕೆ ಅನುಸರಿಸಬೇಕಿದ್ದ ಆಯ್ದ 332 ನಿಯಮಗಳನ್ನು ಸಡಿಲಗೊಳಿಸುವ ಮೂಲಕ ತೊಡಕುಗಳನ್ನು ನಿವಾರಿಸಲಾಗಿದೆ.  ಸುಲಲಿತ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಫಿಡವಿಟ್ ಬೇಸ್ಡ್ ಕ್ಲಿಯರ್ಸ್ ಯೋಜನೆ, ಸೆಂಟ್ರಲ್ ಇನ್‍ಸ್ಪೆಕ್ಷನ್ ಸಿಸ್ಟೆಮ್ ಯೋಜನೆ ಜಾರಿ ತರಲಾಗಿದೆ. ಜತೆಗೆ,  ಭೂ, ಕಾರ್ಮಿಕ ಸೇರಿದಂತೆ ಹಲವು ಸುಧಾರಣೆಗಳನ್ನು ತರಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ವಿಭಾಗಗಳಲ್ಲಿ ಶೇ.100 ಅಂಕಗಳನ್ನು ಗಳಿಸುವ ಗುರಿ ಸಾಧಿಸುವ ವಿಶ್ವಾಸ ಇದೆ ಎಂದು ಅವರು ಹೇಳಿದರು.

ರಾಜ್ಯದ ಹೂಡಿಕೆ ಪ್ರಚಾರ ಏಜೆನ್ಸಿಯ ದೂರದೃಷ್ಟಿಯನ್ನು ಪ್ರಶಂಸಿಸಿರುವ ಇನ್ವೆಸ್ಟ್ ಇಂಡಿಯಾ,  "ಈ ಸ್ಪರ್ಧಾತ್ಮಕ ವೇದಿಕೆಯಲ್ಲಿ ತನ್ನ ಪ್ರಸ್ತುತತೆಯನ್ನು ಸಾಬೀತುಪಡಿಸಲು ಗಮನಾರ್ಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ತನ್ನ ನಾಯಕತ್ವವನ್ನು ನಿರೂಪಿಸಿರುವುದು ಪ್ರಶಂಸಾರ್ಹ" ಎಂದಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು. 

ಕರ್ನಾಟಕ ಉದ್ಯೋಗ ಮಿತ್ರದ ಶ್ರೇಯಾಂಕ: ಆಧ್ಯಾದೇಶ ಮತ್ತು ಸಂಘಟನೆ-ಶೇ.95, ಕಾರ್ಯತಂತ್ರ ಮತ್ತು ಮಾರ್ಕೆಟಿಂಗ್-ಶೇ.79, ಹೂಡಿಕೆದಾರರ ಸ್ನೇಹಿ-ಶೇ.86, ಹೂಡಿಕೆ ಯೋಜನೆಗಳ ಗಳಿಕೆ-ಶೇ.100, ಹೂಡಿಕೆ ಯೋಜನೆಗಳಿಗೆ ಸೌಲಭ್ಯ-ಶೇ.100, ಯೋಜನೆ ಜಾರಿ ಬಳಿಕ ಪೂರಕ ನೆರವು-ಶೇ.100, ವ್ಯವಸ್ಥೆ ಮತ್ತು ಮೂಲಸೌಕರ್ಯ-ಶೇ.78, ವೆಬ್‍ಸೈಟ್-ಶೇ.100, ಸರಾಸರಿ-ಶೇ.92 ಅಂಕಗಳನ್ನು ಗಳಿಸುವ ಮೂಲಕ ಶ್ರೇಯಾಂಕದಲ್ಲಿ ಅಗ್ರಮಾನ್ಯ ಸಾಧನೆ ಮಾಡಿದೆ ಎಂದು ಅವರು ಹೇಳಿದರು.

ರೇಟಿಂಗ್ ಹೇಗೆ?: ರಾಜ್ಯವಾರು ಐಪಿಎ (ಹೂಡಿಕೆ ಪ್ರಚಾರ ಏಜೆನ್ಸಿ) ಶ್ರೇಯಾಂಕದಡಿ ಪರಿಗಣಿಸುವ ಎಲ್ಲಾ ಎಂಟು ವಿಭಾಗಗಳಲ್ಲಿ ಕರ್ನಾಟಕ ಉದ್ಯೋಗ ಮಿತ್ರ ಗಳಿಸಿರುವಂಥ ಅಂಕಗಳನ್ನು ತಾಂತ್ರಿಕ ಆಧಾರದಲ್ಲಿ ನಿರ್ಧರಿಸಲಾಗಿದೆ. ರಾಜ್ಯ ಐಪಿಎ ರೇಟಿಂಗ್ ಪೆÇೀರ್ಟಲ್‍ನಲ್ಲಿ ಸ್ವೀಕಾರಾರ್ಹ ಪುರಾವೆ/ಪೂರಕ ದಾಖಲೆಗಳು ವಿಭಾಗದಲ್ಲಿ ಉಲ್ಲೇಖಿಸಲಾದ "ಮಾರ್ಗದರ್ಶನ ಟಿಪ್ಪಣಿಗಳ" ವಿಭಾಗದಲ್ಲಿ ಈ ಎಲ್ಲ ಅಂಶಗಳನ್ನು ವಿವರಿಸಲಾಗಿದೆ ಎಂದು ಮುರುಗೇಶ್ ನಿರಾಣಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News