ಈ ವರ್ಷ ಕೋವಿಡ್ ಬೂಸ್ಟರ್ ಡೋಸ್ ಬೇಡ: ಶ್ರೀಮಂತ ದೇಶಗಳಿಗೆ ವಿಶ್ವ ಆರೋಗ್ಯಸಂಸ್ಥೆ ಸಲಹೆ

Update: 2021-09-09 04:25 GMT
ಡಬ್ಲ್ಯುಎಚ್ ಒ ಮಹಾನಿರ್ದೇಶಕ ಟೆಡ್ರೋಸ್ ಅಧನೋಮ್ ಘೇಬ್ರಿಯಾಸಸ್(Photo credit: twitter@DrTedros)

ಜಿನೀವಾ, ಸೆ.9: ಕೊರೋನ ವೈರಸ್ ವಿರುದ್ಧದ ಲಸಿಕೆಗಳ ಪೂರೈಕೆಯನ್ನು ಹೇರಳವಾಗಿ ಹೊಂದಿರುವ ಶ್ರೀಮಂತ ದೇಶಗಳು ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ನೀಡುವ ನಿರ್ಧಾರವನ್ನು ವರ್ಷಾಂತ್ಯದವರೆಗೆ ತಡೆಹಿಡಿದು ಲಸಿಕೆ ಅಗತ್ಯವಿರುವ ಬಡ ದೇಶಗಳಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಕರೆ ನೀಡಿದ್ದಾರೆ. ಬೂಸ್ಟರ್ ಡೋಸ್ ಬಗ್ಗೆ ಈ ಹಿಂದೆ ಮಾಡಿಕೊಂಡ ಮನವಿಯನ್ನು ಬಹುತೇಕ ನಿರ್ಲಕ್ಷಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಕಷ್ಟು ಸರಬರಾಜು ಇರುವ ದೇಶಗಳಲ್ಲಿ ಬೂಸ್ಟರ್ ಡೋಸ್‌ಗಳನ್ನು ನೀಡಲು ಮತ್ತು ಲಸಿಕೆ ಕೊರತೆ ಎದುರಿಸುತ್ತಿರುವ ಬಡ ದೇಶಗಳಲ್ಲಿ ಮೊದಲ ಡೋಸ್ ನೀಡಲು ಸಾಕಾಗುವಷ್ಟು ಲಸಿಕೆ ಲಭ್ಯವಿದೆ ಎಂದು ಔಷಧ ಉತ್ಪಾದಕ ಕಂಪೆನಿಗಳ ಸಂಘ ಹೇಳಿಕೆ ನೀಡಿರುವುದು ದಿಗಿಲು ಮೂಡಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಅಧನೋಮ್ ಘೇಬ್ರಿಯಾಸಸ್ ಹೇಳಿದ್ದಾರೆ.

"ಬಡದೇಶಗಳ ಜನತೆ ಉಳಿದ ಅಲ್ಪಸ್ವಲ್ಪ ಲಸಿಕೆಗೆ ತೃಪ್ತಿಪಡುತ್ತಾರೆ ಎಂದು ಜಗತಿಕ ಲಸಿಕೆ ಪೂರೈಕೆಯನ್ನು ನಿಯಂತ್ರಿಸುವ ಕಂಪೆನಿಗಳು ಮತ್ತು ದೇಶಗಳು ಭಾವಿಸುವುದನ್ನು ಮೌನವಾಗಿ ನೋಡುತ್ತಾ ಕೂರಲು ಸಾಧ್ಯವಿಲ್ಲ" ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

"ಲಸಿಕೆ ಉತ್ಪಾದಕರು ಡಾಲರ್ ನೀಡುವ ಶ್ರೀಮಂತ ದೇಶಗಳ ಜತೆ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಂಡು ಅದನ್ನು ಈಡೇರಲು ಆದ್ಯತೆ ನೀಡಿದ್ದಾರೆ. ಬಡ ದೇಶಗಳಿಗೆ ತಮ್ಮ ಜನರನ್ನು ರಕ್ಷಿಸುವ ಸಾಧನಗಳನ್ನು ವಂಚಿಸಲಾಗಿದೆ" ಎಂದು ಆಪಾದಿಸಿದರು.

ಆದರೆ ಶ್ರೀಮಂತ ದೇಶಗಳಾದ ಬ್ರಿಟನ್, ಡೆನ್ಮಾರ್ಕ್, ಫ್ರಾನ್ಸ್, ಗ್ರೀಸ್, ಜರ್ಮನಿ ಮತ್ತು ಸ್ಪೇನ್ ಈಗಾಗಲೇ ತಮ್ಮ ದೇಶದ ಹಿರಿಯ ನಾಗರಿಕರು ಮತ್ತು ಪ್ರತಿರೋಧ ಶಕ್ತಿ ಕಡಿಮೆ ಇರುವವರಿಗೆ ಮೂರನೇ ಡೋಸ್ ನೀಡಲು ಆರಂಭಿಸುವ ಬಗ್ಗೆ ಚಿಂತನೆ ನಡೆಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News