ಗಣೇಶೋತ್ಸವಕ್ಕೆ ನಿರ್ಬಂಧ: ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ

Update: 2021-09-09 10:30 GMT
ಫೈಲ್ ಚಿತ್ರ

ಬೆಂಗಳೂರು, ಸೆ.9: ಗಣೇಶೋತ್ಸವ ಅಂಗವಾಗಿ ಬಿಬಿಎಂಪಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಈ ಕೂಡಲೇ ವಾಪಸ್ಸು ಪಡೆಯುವಂತೆ ಆಗ್ರಹಿಸಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಬಿಬಿಎಂಪಿ ಮುತ್ತಿಗೆ ಚಳುವಳಿ ನಡೆಸಿದರು.

ಗುರುವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಜಮಾಯಿಸಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ನಾಲ್ಕು ಅಡಿ ಗಣೇಶನ ಮೂರ್ತಿಗೆ ಮಾತ್ರ ಸೀಮಿತಗೊಳಿಸಿರುವ ಕ್ರಮ ಖಂಡಿಸಿ, ಬೃಹತ್ ಗಣಪನ ಮೂರ್ತಿಗಳನ್ನಿಟ್ಟು ಬಿಬಿಎಂಪಿ ಹಾಗೂ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಪ್ರತಿಷ್ಠಾಪಿಸಬೇಕು ಎಂದು ನಿರ್ದೇಶನ ನೀಡಿರುವ ನಿಯಮ ಸರಿಯಲ್ಲ. ಮೂರ್ತಿಗಳು ಇಷ್ಟೇ ಗಾತ್ರ ಇರಬೇಕೆಂದು ಹೇಳುವ ಅಧಿಕಾರ ಯಾರಿಗೂ ಇಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಪಾಲಿಕೆಯ 198 ವಾರ್ಡ್‍ಗಳಲ್ಲಿ ವಾರ್ಡಿಗೆ ಒಂದರಂತೆ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶವಿದೆ ಎನ್ನುವುದು ಸೂಕ್ತವಲ್ಲ. ನಾವೂ ಒಂದು ವಾರ್ಡ್‍ಗೆ ಎಷ್ಟು ಬೇಕು ಅಷ್ಟೊಂದು ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಹೇಳಿದರು.

ಅಲ್ಲದೆ, ಮೂರು ದಿನಗಳಿಗೆ ಸೀಮಿತಗೊಳಿಸಿ ಗಣೇಶೋತ್ಸವ ಆಚರಣೆಗೆ ಸೂಚಿಸಿರುವುದು ಸರಿಯಲ್ಲ ಎಂದ ಅವರು,ನಾವೂ ಪಾಲಿಕೆ ನಿಯಮಗಳನ್ನು ಪಾಲನೆ ಮಾಡದೇ, ಹಬ್ಬ ಆಚರಣೆ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ವಶಕ್ಕೆ: ಪ್ರತಿಭಟನಾನಿರತ ಹಿಂದೂ ಸಂಘಟನೆ ಕಾರ್ಯಕರ್ತರು, ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದು ಬಸ್ಸಿನಲ್ಲಿ ಕರೆದೊಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News