ಕಾಡುಹಂದಿ ಬೇಟೆ ವೇಳೆ ಯುವಕನಿಗೆ ಗುಂಡೇಟು: 5 ಮಂದಿಯ ಬಂಧನ

Update: 2021-09-09 11:08 GMT
ಸಾಂದರ್ಭಿಕ ಚಿತ್ರ

ಮಂಡ್ಯ, ಸೆ.9: ಕಾಡುಹಂದಿಗೆ ಹೊಡೆದ ಗುಂಡು ಯುವಕನಿಗೆ ತಗುಲಿದ ಘಟನೆ ಶ್ರೀರಂಗಪಟ್ಟಣ ತಾಲೂಕು ಮೇಳಾಪುರ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ನಡೆದಿದ್ದು, ಗ್ರಾಮಸ್ಥರು 5 ಮಂದಿ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೈಸೂರಿಗೆ ಸಮೀಪವಿರುವ ಮೇಳಾಪುರ ಬಳಿ ಕಬ್ಬಿನಗದ್ದೆಯಲ್ಲಿ ಕಾಡುಹಂದಿಯನ್ನು ಬೇಟೆಯಾಡಲು ಐದು ಮಂದಿ ಯುವಕರ ತಂಡ ನಾಡ ಬಂದೂಕು ಸಮೇತ ಆಗಮಿಸಿದ್ದು, ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಯುವಕನಿಗೆ ಗುಂಡು ತಗುಲಿದೆ.

ಕಬ್ಬಿನಗದ್ದೆಯಲ್ಲಿ ಹಂದಿಗೆ ಹೊಡೆದ ಗುಂಡು, ಸಮೀಪದಲ್ಲೇ ಮನೆಯ ಮುಂದೆ ಕುಳಿತಿದ್ದ ಮೇಳಾಪುರ ಗ್ರಾಮದ ಮಹದೇವ ಎಂಬುವರ ಪುತ್ರ ಮಾದೇಶ(25) ಎಂಬಾತನ ಹೊಟ್ಟೆಗೆ ತಗುಲಿ ಆತ ಗಾಯಗೊಂಡಿದ್ದಾನೆ.

ಆದರೆ, ತಾವು ಹೊಡೆದ ಗುಂಡು ಯುವಕನಿಗೆ ತಗುಲಿರುವುದು ಬೇಟೆಗೆ ಬಂದಿದ್ದ ಯುವಕರಿಗೆ ಗೊತ್ತಾಗಿಲ್ಲ. ಮಾದೇಶನಿಂದ ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ, ಬೇಟೆಯಾಡಿದ ಹಂದಿ ಸತ್ತುಬಿದ್ದಿದೆ ಬನ್ನಿ ಎಂದು ಕರೆದಾಗ ಯುವಕರು ಅಲ್ಲಿಗೆ ತೆರಳಿದ್ದಾರೆ. ಆಗ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ರವಿ, ಶರತ್, ದೀಪಕ್, ದೇವರಾಜು ಹಾಗೂ ರಘು ಎಂಬ ಯುವಕರೇ ಹಂದಿ ಬೇಟೆಯಾಡಲು ಬಂದಿದ್ದವರು. ಇವರು ಎಲ್ಲಿಯವರು ಎಂದು ತಿಳಿದು ಬಂದಿಲ್ಲ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಗುಂಡು ತಗುಲಿ ಗಾಯಗೊಂಡಿರುವ ಯುವಕ ಮಾದೇಶನಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News