ಖಾಸಗಿ ಆಸ್ಪತ್ರೆಗಳಿಂದ ಕೋವಿಡ್ ಲಸಿಕೆ ಖರೀದಿಗೆ ಕಾರ್ಮಿಕ ನಿಧಿಯ ಬಳಕೆ: ರಾಜ್ಯ ಸರಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ

Update: 2021-09-09 11:05 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಟ್ಟಡ ಕಾರ್ಮಿಕರಿಗಾಗಿ ಖಾಸಗಿ ಆಸ್ಪತ್ರೆಗಳಿಂದ ಕೋವಿಡ್ ಲಸಿಕೆಯನ್ನು ಖರೀದಿಸಲು ಕರ್ನಾಟಕ ಸರಕಾರವು ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಬಳಸುತ್ತಿದ್ದು, ಇದು ಕಾರ್ಮಿಕ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಸರಕಾರವು ಈ ವರ್ಷದ ಜೂನ್ ನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡುತ್ತಿರುವಾಗ ರಾಜ್ಯ ಸರಕಾರವೇಕೆ ಲಸಿಕೆಗೆ ಹಣ ಪಾವತಿಸಬೇಕು ಎಂದು ಈ ಸಂಘಟನೆಗಳು ಪ್ರಶ್ನಿಸಿವೆ.

ಈ ಬಗ್ಗೆ ವರದಿಯನ್ನು ಪ್ರಕಟಿಸಿರುವ ಸುದ್ದಿ ಜಾಲತಾಣ ‘theprint.in’ಗೆ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 2021, ಆ.27ರಂದು ಹೊರಡಿಸಿರುವ ಕಾರ್ಯಾದೇಶದ ಪ್ರತಿಯು ಲಭ್ಯವಾಗಿದೆ. ಈ ಆದೇಶದಲ್ಲಿ 15.60 ಕೋ.ರೂ.ವೆಚ್ಚದಲ್ಲಿ (ಪ್ರತಿ ಡೋಸ್ಗೆ 780 ರೂ.) ಕೋವಿಶೀಲ್ಡ್ ಲಸಿಕೆಯ ಎರಡು ಲಕ್ಷ ಡೋಸ್ಗಳನ್ನು ಪೂರೈಸುವಂತೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಗಳ ಸಂಘ (ಪಿಎಚ್ಎಎನ್ಎ)ಕ್ಕೆ ಬೇಡಿಕೆಯನ್ನು ಸಲ್ಲಿಸಲಾಗಿದೆ.

ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗಾಗಿ ಪಿಂಚಣಿ, ಸಾಲ ಮತ್ತು ವಿದ್ಯಾರ್ಥಿವೇತನದಂತಹ ಕಲ್ಯಾಣ ಯೋಜನೆಗಳಿಗಾಗಿ ಮೀಸಲಾಗಿರುವ ಹಣವನ್ನು ಸರಕಾರವು ದುರುಪಯೋಗಿಸುತ್ತಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.

ಇದು ಸರಕಾರದ ಹಣವಲ್ಲ. ಕಲ್ಯಾಣ ನಿಧಿಗಾಗಿ ಬಿಲ್ಡರ್ ಗಳಿಂದ ಸೆಸ್ ಸಂಗ್ರಹಿಸಲಾಗುತ್ತದೆ ಮತ್ತು ಅದು ಕಾರ್ಮಿಕರಿಗೆ ವಿಮೆ, ಪರಿಹಾರ, ಟೂಲ್ ಕಿಟ್ ಗಳು ಮತ್ತು ಪಿಂಚಣಿ ಇತ್ಯಾದಿ ಸೌಲಭ್ಯಗಳಿಗೆ ಮೀಸಲಾಗಿದೆ ಎಂದು ಹೇಳಿದ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ಎಐಸಿಸಿಟಿಯು ಸದಸ್ಯ ಪಿ.ಪಿ.ಅಪ್ಪಣ್ಣ ಅವರು, ಬಡಕಾರ್ಮಿಕರಿಗೆ ಉಚಿತವಾಗಿ ಲಸಿಕೆಯನ್ನು ಖಚಿತಪಡಿಸುವ ಬದಲು ರಾಜ್ಯಸರಕಾರವು ಅವರು ಕಷ್ಟ ಪಟ್ಟು ಗಳಿಸಿದ ಹಣವನ್ನು ಲಸಿಕೆಯ ನೆಪದಲ್ಲಿ ಶ್ರೀಮಂತ ಖಾಸಗಿ ಆಸ್ಪತ್ರೆಗಳ ಬೊಕ್ಕಸಕ್ಕೆ ಸೇರಿಸುತ್ತಿದೆ ಎಂದು ಆರೋಪಿಸಿದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕಾರ್ಮಿಕ ಸಚಿವ ಎ.ಶಿವರಾಮ ಹೆಬ್ಬಾರ ಅವರು ಲಸಿಕೆಗಳಿಗಾಗಿ ಮಾಡುತ್ತಿರುವ ವೆಚ್ಚವನ್ನು ಸಮರ್ಥಿಸಿಕೊಂಡರು ಮತ್ತು ಅದಕ್ಕೆ ವಿರೋಧವು ರಾಜಕೀಯ ಸ್ವರೂಪದ್ದಾಗಿದೆ ಎಂದು ಹೇಳಿದರು.

‘ಅದು ಕೇವಲ 15.60 ಕೋ.ರೂ.ಅಲ್ಲ. ಕಟ್ಟಡ ಕಾರ್ಮಿಕರಿಗಾಗಿ ಲಸಿಕೆಗಳ ಖರೀದಿಗೆ ನಾವು 25 ಕೋ.ರೂ.ಗಳನ್ನು ನಿಗದಿಗೊಳಿಸಿದ್ದೇವೆ. ನಮ್ಮ ಕಾರ್ಮಿಕರ ಆರೋಗ್ಯ, ಬದುಕು ಮತ್ತು ಜೀವನೋಪಾಯಗಳನ್ನು ಖಚಿತ ಪಡಿಸಿಕೊಳ್ಳಲು ಬಯಸುವುದರಲ್ಲಿ ತಪ್ಪೇನಿದೆ ’ ಎಂದು ಅವರು ಪ್ರಶ್ನಿಸಿದರು.

ಏನಿದು ಕಾರ್ಮಿಕರ ಕಲ್ಯಾಣ ನಿಧಿ?
ಸುಮಾರು 29 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರು ಕಲ್ಯಾಣ ಮಂಡಳಿಯ ಸದಸ್ಯರಾಗಿದ್ದು,10 ಲ.ರೂ.ಗೂ ಅಧಿಕ ನಿರ್ಮಾಣ ವೆಚ್ಚದ ಕಟ್ಟಡಗಳ ಮೇಲೆ ಶೇ.1ರಷ್ಟು ಸೆಸ್ ವಿಧಿಸುವ ಮೂಲಕ ಕಲ್ಯಾಣ ನಿಧಿಗೆ ಹಣವನ್ನು ಸಂಗ್ರಹಿಸಲಾಗುತ್ತದೆ. ಈ ಹಣವನ್ನು ಬಳಿಕ ಕಾರ್ಮಿಕರ ಕಲ್ಯಾಣ ಯೋಜನೆಗಳಿಗಾಗಿ ಬಳಸಲಾಗುತ್ತದೆ.

ಕಾರ್ಮಿಕರಿಗೆ ಬಸ್ ಪಾಸ್ ವಿತರಣೆ,ವಿದ್ಯಾರ್ಥಿ ವೇತನ ಸೇರಿದಂತೆ 15 ಖಚಿತ ಯೋಜನೆಗಳನ್ನು ಕಲ್ಯಾಣ ಮಂಡಳಿಯು ಪಟ್ಟಿ ಮಾಡಿದೆ. ಆದರೆ ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಖರೀದಿಯಂತಹ ವಿವಿಧ ವೆಚ್ಚಗಳಿಗೆ ನಿಧಿಯ ಬಳಕೆಯನ್ನು ಇದರಲ್ಲಿ ಉಲ್ಲೇಖಿಸಲಾಗಿಲ್ಲ.

ಮಂಡಳಿಯ ಅಭಿಪ್ರಾಯದಲ್ಲಿ ‘ಕಲ್ಯಾಣ’ವು ಏನನ್ನು ಒಳಗೊಂಡಿದೆ ಎಂಬ ಪ್ರಶ್ನೆಗೆ ಕಾರ್ಯದರ್ಶಿ ಮತ್ತು ಸಿಇಒ ಅಕ್ರಮ್ ಪಾಷಾ ಅವರು, ಅದಕ್ಕೆ ಇಂತಹುದೇ ಕಟ್ಟುನಿಟ್ಟಿನ ವ್ಯಾಖ್ಯೆಯಿಲ್ಲ ಎಂದು ಉತ್ತರಿಸಿದ್ದಾರೆ.

ವಿರೋಧಾಭಾಸದ ಹೇಳಿಕೆಗಳು
ಕೇಂದ್ರದಿಂದ ರಾಜ್ಯಕ್ಕೆ ಲಸಿಕೆ ಪೂರೈಕೆಯಲ್ಲಿ ಕೊರತೆಯಿದ್ದಾಗ ಕಲ್ಯಾಣ ನಿಧಿಯ ಮೂಲಕ ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಖರೀದಿಗೆ ನಿರ್ಧರಿಸಲಾಗಿತ್ತು ಎಂದು ತಿಳಿಸಿದ ಹೆಬ್ಬಾರ, ‘ಸುಮಾರು 29 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರ ಪೈಕಿ ಕೇವಲ 1.86 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗಳು ಬಳಕೆಯಾಗದೆ ಉಳಿದುಕೊಂಡಿದ್ದರಿಂದ ಅವುಗಳಿಂದ ಲಸಿಕೆ ಖರೀದಿಸಿ ನಮ್ಮ ಕಾರ್ಮಿಕರಿಗೆ ನೀಡಲು ನಾವು ನಿರ್ಧರಿಸಿದ್ದೆವು. ಕಳೆದೊಂದು ವಾರದಲ್ಲಿ ಲಸಿಕೆ ಪೂರೈಕೆ ಸ್ಥಿತಿಯಲ್ಲಿ ಸುಧಾರಣೆಯಾಗಿದೆ,ಹೀಗಾಗಿ ನಾವು ಇನ್ನು ಮುಂದೆ ಲಸಿಕೆಯನ್ನು ಖರೀದಿಸುವ ಅಗತ್ಯವಿಲ್ಲ’ ಎಂದು ಹೇಳಿದರು. ಅಗತ್ಯವಾದರೆ ಕಾರ್ಯಾದೇಶವನ್ನು ಹಿಂದೆಗೆದುಕೊಳ್ಳಲಾಗುವುದು ಎಂದರು. ಆದರೆ ಈವರೆಗೆ ಅಂತಹ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ.
  
ಕಾರ್ಯಾದೇಶಕ್ಕೆ ಸಹಿ ಹಾಕಿರುವ ಪಾಷಾ ಅವರ ಹೇಳಿಕೆ ಸಚಿವರ ಹೇಳಿಕೆಗೆ ವಿರುದ್ಧವಾಗಿದೆ. ‘ಲಸಿಕೆಗಾಗಿ ಕಲ್ಯಾಣ ನಿಧಿಯ ಬಳಕೆ ಮಂಡಳಿಯ ನಿರ್ಧಾರವಾಗಿರಲಿಲ್ಲ. ಮುಖ್ಯ ಕಾರ್ಯದರ್ಶಿಗಳ ನಿರ್ದೇಶವನ್ನು ನಾವು ಪಾಲಿಸಿದ್ದೇವೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಕಾರ್ಮಿಕರಿಗಾಗಿ ರೇಷನ್ ಮತ್ತು ಟೂಲ್ ಕಿಟ್ ಗಳಿಗಾಗಿ ನಾವು ಹಣವನ್ನು ವೆಚ್ಚ ಮಾಡಿದ್ದೇವೆ, ಆದರೆ ಲಸಿಕೆ ಖರೀದಿಗೆ ಒಂದೇ ಒಂದು ಪೈಸೆಯನ್ನು ವೆಚ್ಚ ಮಾಡಿಲ್ಲ’ ಎಂದು ಪಾಷಾ ಹೇಳಿದ್ದಾರೆ. ಈ ನಡುವೆ ಈಗಾಗಲೇ 400 ಡೋಸ್ ಲಸಿಕೆಯನ್ನು ಕಟ್ಟಡ ಕಾರ್ಮಿಕರಿಗೆ ನೀಡಲಾಗಿದೆ ಎಂದು ಪಿಎಚ್ಎನ್ಎ ದೃಢಪಡಿಸಿದೆ ಎಂದು theprint.in ವರದಿ ಮಾಡಿದೆ.

‘ಸರಕಾರದೊಂದಿಗೆ ನಮ್ಮ ಒಡಂಬಡಿಕೆಯಂತೆ ಅದು ಲಸಿಕೆಯ ಬೆಲೆಯನ್ನು ತಕ್ಷಣ ಪಾವತಿಸುತ್ತದೆ ಮತ್ತು ಲಸಿಕೆ ನೀಡಿರುವ ಬಗ್ಗೆ ಪ್ರಮಾಣಪತ್ರವನ್ನು ಸಲ್ಲಿಸಿದ ಬಳಿಕ ಸೇವಾ ಶುಲ್ಕವನ್ನು ಪಾವತಿಸುತ್ತದೆ. ಆರು ಲ.ಡೋಸ್ ಗಳಿಗಾಗಿ ಕಾರ್ಯಾದೇಶವನ್ನು ಹೊರಡಿಸಲಾಗಿದ್ದು, ಈ ಪೈಕಿ ಎರಡು ಲಕ್ಷ ಡೋಸ್ ಗಳ ಜವಾಬ್ದಾರಿಯನ್ನು ನಮ್ಮ ಸಂಘಕ್ಕೆ ನೀಡಲಾಗಿದೆ. ಸೆ.3ರಂದು ಲಸಿಕೀಕರಣದ ಉದ್ಘಾಟನೆ ನಡೆದಿದ್ದು,ಅಂದು ನಾವು 400 ಕಾರ್ಮಿಕರಿಗೆ ಲಸಿಕೆ ನೀಡಿದ್ದೇವೆ ’ ಎಂದು ತಿಳಿಸಿದ ಪಿಎಚ್ಎಎನ್ಎ ಅಧ್ಯಕ್ಷ ಎಚ್.ಎಸ್.ಪ್ರಸನ್ನ ಅವರು ‘ಲಸಿಕೆ ನೀಡಿಕೆ ಅಭಿಯಾನವು ಸೋಮವಾರದಿಂದ ಸಮರೋಪಾದಿಯಲ್ಲಿ ನಡೆಯಬೇಕಿತ್ತು, ಆದರೆ ಕಾರ್ಯಕ್ರಮವನ್ನು ಸದ್ಯಕ್ಕೆ ತಡೆಹಿಡಿಯುವಂತೆ ನಮ್ಮ ಸಂಘಕ್ಕೆ ಸೂಚಿಸಲಾಗಿದೆ. ಈಗಾಗಲೇ ನೀಡಲಾಗಿರುವ 400 ಡೋಸ್ ಗಳ ಹಣ ನಮಗೆ ಇನ್ನಷ್ಟೇ ಬರಬೇಕಿದೆ ’ ಎಂದರು.

ಈ ನಡುವೆ ಆರೆಸ್ಸೆಸ್ ನೊಂದಿಗೆ ಸಂಯೋಜಿತ ಕಾರ್ಮಿಕ ಒಕ್ಕೂಟ ಭಾರತೀಯ ಮಜದೂರ್ ಸಂಘ (ಬಿಎಂಎಸ್)ವು ರಾಜ್ಯ ಸರಕಾರದ ಕಾರ್ಯಾದೇಶವು ಕಾನೂನುಬಾಹಿರವಾಗಿದೆ ಎಂದು ಬಣ್ಣಿಸಿದೆ.

ತನ್ನ ಅನುಮತಿಯಿಲ್ಲದೆ ಕಾರ್ಮಿಕರ ಕಲ್ಯಾಣ ನಿಧಿಯ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ ಎಂದು ಬಿಎಂಎಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಲೋಕೇಶ ಸಿ.ವಿ.ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News