ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಏನೂ ಇಲ್ಲ ಎನ್ನುತ್ತಿದವರಿಗೆ ಕಲಬುರಗಿ ಪಾಲಿಕೆ ಚುನಾವಣೆ ಉತ್ತರ: ಎಚ್.ಡಿ.ದೇವೇಗೌಡ

Update: 2021-09-09 15:08 GMT

ಮೈಸೂರು,ಸೆ.9: ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಏನೂ ಇಲ್ಲ ಎನ್ನುತ್ತಿದ್ದವರಿಗೆ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿಯನ್ನ ತೋರಿಸಲಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ತಿಳಿಸಿದ್ದಾರೆ.

ಖಾಸಗಿ ಕಾರ್ಯಕ್ರಮ ನಿಮಿತ್ತ ಗುರುವಾರ ಮೈಸೂರಿಗೆ ಆಗಮಿಸಿದ್ದ ಎಚ್.ಡಿ.ದೇವೇಗೌಡರು ನಗರದ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 

ಕಲ್ಬರ್ಗಿ ಮಹಾನಗರ ಪಾಲಿಕೆಯಲ್ಲಿ 7 ರಲ್ಲಿ 4 ಸ್ಥಾನ ಗೆದ್ದಿದ್ದೇವೆ. ಎರಡು ಸ್ಥಾನ ಮಾರ್ಜಿನ್ ನಲ್ಲಿ ಸೋತಿದ್ದೇವೆ. ಇದು ಹೆಚ್.ಡಿ ಕುಮಾರಸ್ವಾಮಿ ಅವರ ಶ್ರಮದ ಫಲ. ಉ-ಕರ್ನಾಟಕ ಭಾಗದಲ್ಲಿ ಜೆಡಿಎಸ್ ಶಕ್ತಿ ಏನು ಎಂಬುವವರಿಗೆ ಉತ್ತರ ಸಿಕ್ಕಿದೆ ಎಂದು ಎಂದು ಹೇಳಿದರು.

ಕಲ್ಬುರ್ಗಿ ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಹಿನ್ನೆಲೆಯಲ್ಲಿ  ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಮಾತನಾಡಿದ್ದೇನೆ. ಅವರೊಬ್ಬರೆ ನನ್ನ ಜೊತೆ ಮಾತನಾಡಿರುವುದು, ಅವರ ಪಕ್ಷದ ನಾಯಕರ ಜತೆ ಚರ್ಚಿಸುವಂತೆ ತಿಳಿಸಿದ್ದೇನೆ ಎಂದರು.

ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲಿ. ಸರ್ಕಾರದ ನಿರ್ಧಾರಕ್ಕೆ ನಮ್ಮ ಪಕ್ಷ ಬೆಂಬಲವನ್ನು ನೀಡುತ್ತದೆ ಎಂದು ಎಚ್.ಡಿ.ದೇವೇಗೌಡ ತಿಳಿಸಿದರು.

ಶಾಸಕ ಜಿ.ಟಿ.ದೇವೇಗೌಡ ಇನ್ನೂ ಜೆಡಿಎಸ್ ಪಕ್ಷದಲ್ಲೇ ಇದ್ದಾರೆ. ಹಾಗಾಗಿ ಅವರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬುದರ ಬಗ್ಗೆ ಚರ್ಚೆ ಅನಗತ್ಯ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಶಾಸಕ ಜಿ.ಟಿ.ದೇವೇಗೌಡ ಇನ್ನೂ ಜೆಡಿಎಸ್ ಪಕ್ಷ ಬಿಟ್ಟಿಲ್ಲ, ಸುಮ್ಮನೆ ಕಾಂಗ್ರೆಸ್‍ಗೆ ಹೋಗುತ್ತಾರೆ ಎಂದರೆ ಹೇಗೆ? ಅವರು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಮೇಲೆ ಅವರ ಬಗ್ಗೆ ಮಾತನಾಡುತ್ತೇನೆ' ಎಂದರು.

'ಸಿದ್ದರಾಮಯ್ಯ ಅವರ ಮನೆಗೆ ಹೋಗಿ ಮಾತನಾಡಿದ್ದಾರೆ. ಇನ್ನೂ ಯಡಿಯೂರಪ್ಪ ಅವರ ಮನೆಗೂ ಹೋಗಿ ಮಾತನಾಡಿದ್ದಾರೆ. ಪಕ್ಷಕ್ಕೆ ರಾಜೀನಾಮೆ ಕೊಡದೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂದು ಹೇಳುವುದು ಸರಿಯಲ್ಲ' ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News