ಎಸ್ಸಿ-ಎಸ್ಟಿ ವರ್ಗದ ಮಹಿಳೆಯರನ್ನು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-09-09 17:13 GMT

ಬೆಂಗಳೂರು, ಸೆ. 9: ಪರಿಶಿಷ್ಟ ಜಾತಿ(ಎಸ್ಸಿ), ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿದ ಮಹಿಳೆಯರನ್ನು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.

ಗುರುವಾರ ಟಾಟಾ ಸ್ಟೀಲ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಹಾಗೂ ನಡ್ಜ್ ಪ್ರತಿಷ್ಠಾನದ ಸದಸ್ಯ ಬಿ.ಮುತ್ತುರಾಮನ್ ಅವರ ನೇತೃತ್ವದ ನಿಯೋಗದೊಂದಿಗೆ ಮಾತನಾಡಿದ ಅವರು, ಅತಿ ಹೆಚ್ಚು ತಲಾ ಆದಾಯ ಹೊಂದಿರುವ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಈ ಕೊಡುಗೆ ನೀಡುವುದು ಶೇ.30ರಷ್ಟು ಮಹಿಳೆಯರು ಪರಿಶಿಷ್ಟ ಸಮುದಾಯದವರಾಗಿದ್ದು, ಕೌಶಲ್ಯವನ್ನು ಹೊಂದಿದವರಾಗಿದ್ದಾರೆ ಎಂದರು. ರಾಜ್ಯದಲ್ಲಿರುವ 7,500 ಸ್ವಸಹಾಯ ಗುಂಪುಗಳನ್ನು ಆರ್ಥಿಕ ಚಟುವಟಿಕೆಗಲ್ಲಿ ತೊಡಗಿಸಬೇಕು ಎಂದು ತಿಳಿಸಿದರು. 

ನಡ್ಜ್ ಪ್ರತಿಷ್ಠಾನದ ಸಿ.ಇ.ಒ ಅತುಲ್ ಸತೀಜಾ ಮಾತನಾಡಿ, ಬಡತನವನ್ನು ನಿವಾರಿಸುವ ಉದ್ದೇಶದಿಂದ `ನಡ್ಜ್' ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಕರ್ನಾಟಕವೂ ಸೇರಿದಂತೆ ಭಾರತದಾದ್ಯಂತ ಬಡತನ ನಿವಾರಣೆ ಮತ್ತು ಜೀವನೋಪಾಯದ ಮೂಲಕ ದೊಡ್ಡ ಪ್ರಮಾಣದ ಸಾಮಾಜಿಕ ಪರಿವರ್ತನೆ ತರುವುದಾಗಿದೆ ಎಂದು ಹೇಳಿದರು. 

ಆರು ವರ್ಷಗಳಲ್ಲಿ ಕೌಶಲ್ಯ ಅಭಿವೃದ್ಧಿ, ಸಾಮಾಜಿಕ ಉದ್ಯಮಶೀಲತೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಡ್ಜ್ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಉತ್ಸುಕವಾಗಿದೆ ಎಂದು ತಿಳಿಸಿದರು. 

ನಡ್ಜ್ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ವಿನೋದ್, ಸುಧಾ ಶ್ರೀನಿವಾಸನ್, ಯೋಜನಾ ಹಾಗೂ ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News