ಕೋವಿಡ್ ಸಂದರ್ಭದಲ್ಲಿ ಮಾನವೀಯ ಸೇವೆ ಸಲ್ಲಿಸಿದ 'ನಾಸಿಹ್ ಫೌಂಡೇಶನ್ '

Update: 2021-09-12 17:24 GMT

ಬೆಂಗಳೂರು, ಸೆ.12: ಮಹಾಮಾರಿ ಕೊರೋನ ಮೊದಲನೆ ಅಲೆಯಿಂದ ಈವರೆಗೆ ಯಾವುದೆ ಪ್ರಚಾರದ ಹಂಗಿಲ್ಲದೆ, ಬಡವರು ಹಾಗೂ ನಿರ್ಗತಿಕರಿಗೆ ಅಗತ್ಯವಿರುವ ರೇಷನ್ ಕಿಟ್, ಔಷಧಗಳನ್ನು ಪೂರೈಸುವ ಮೂಲಕ ಮೌಲಾನ ಸೈಯ್ಯದ್ ಶಬ್ಬೀರ್ ಅಹ್ಮದ್ ನದ್ವಿ ಅವರ ನೇತೃತ್ವದ ನಾಸಿಹ್ ಫೌಂಡೇಶನ್ ಮಾನವೀಯ ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದೆ.

ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಮೌಲಾನ ಸೈಯ್ಯದ್ ಶಬ್ಬೀರ್ ಅಹ್ಮದ್ ನದ್ವಿ, ಕೋವಿಡ್ ಮೊದಲ ಅಲೆ ಆರಂಭವಾದಾಗ ಮೊತ್ತಮೊದಲು ನಮ್ಮ ಫೌಂಡೇಶನ್ ವತಿಯಿಂದ ಬಡ ಕುಟುಂಬಗಳಿಗೆ ರೇಷನ್ ಕಿಟ್‍ಗಳನ್ನು ವಿತರಣೆ ಮಾಡಲಾಯಿತು. ನಗರ ಪ್ರದೇಶದಲ್ಲಿ ಹಲವಾರು ಮಂದಿ ಬಡವರಿಗೆ ನೆರವು ನೀಡುತ್ತಿದ್ದರು. ಆದರೆ, ನಾವು ನಗರದ ಹೊರವಲಯದಲ್ಲಿನ ಪ್ರದೇಶಗಳ ಕಡೆ ಗಮನ ಹರಿಸಿದೆವು ಎಂದರು.

ಲಾಕ್‍ಡೌನ್ ಘೋಷಣೆಯಾದ 15-20 ದಿನಗಳ ನಂತರ ಕೂಲಿ ಕಾರ್ಮಿಕರು, ಚಾಲಕರು, ದಿನಗೂಲಿ ನೌಕರರು, ತಳ್ಳುವ ಗಾಡಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವಂತಹ ಕುಟುಂಬಗಳಲ್ಲಿನ ರೋಗಿಗಳಿಗೆ ಬಿ.ಪಿ, ಶುಗರ್ ಗೆ ಸಂಬಂಧಿಸಿದ ಔಷಧಿಗಳನ್ನು ಒದಗಿಸುವ ಕೆಲಸವನ್ನು ಆರಂಭ ಮಾಡಿದೆವು. ರೋಗಿಗಳು ತಮ್ಮ ಮನೆಯ ಸಮೀಪದ ಮೆಡಿಕಲ್ ಶಾಪ್‍ಗಳಲ್ಲಿ ಔಷಧಿಗಳನ್ನು ಖರೀದಿಸಿ ನಮಗೆ ಮಾಹಿತಿ ನೀಡಿದರೆ, ನಾವು ಆನ್‍ಲೈನ್ ಮೂಲಕ ಅವರಿಗೆ ಹಣ ಪಾವತಿ ಮಾಡುತ್ತಿದ್ದೆವು ಎಂದು ಅವರು ಹೇಳಿದರು.

ರೇಷನ್ ಕಿಟ್‍ಗಳ ವಿತರಣೆ ಜೊತೆಗೆ ಬಡ ಕುಟುಂಬಗಳ ಮಹಿಳೆಯರ ಕೋರಿಕೆ ಮೇರೆಗೆ ಸುಮಾರು 140 ಅಡುಗೆ ಸಿಲಿಂಡರ್‍ಗಳನ್ನು ಪೂರೈಸಿದೆವು. ಔಷಧಗಳನ್ನು ಪೂರೈಸುವ ಪ್ರಕ್ರಿಯೆ ಆರಂಭಿಸಿದಾಗ ಮೊದಲ ತಿಂಗಳು 30 ರಿಂದ 35 ಸಾವಿರ ರೂ.ಖರ್ಚು ಆಯಿತು. ಇದೀಗ ಪ್ರತಿ ತಿಂಗಳು 1.50 ಲಕ್ಷ ರೂ.ಗಳ ಔಷಧಗಳನ್ನು ಬಡ ರೋಗಿಗಳಿಗೆ ನೀಡುತ್ತಿದ್ದೇವೆ ಎಂದು ಮೌಲಾನ ಶಬ್ಬೀರ್ ಅಹ್ಮದ್ ನದ್ವಿ ತಿಳಿಸಿದರು.

ಕೋವಿಡ್ ಸಹಾಯವಾಣಿಯನ್ನು ಆರಂಭಿಸಿ ಕೋವಿಡ್ ಸೋಂಕಿನಿಂದ ಮೃತಪಡುವವರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳು, ದಫನ್ ಕಾರ್ಯದ ವ್ಯವಸ್ಥೆ ಮಾಡಲು ಸಹಾಯ ಒದಗಿಸಲಾಯಿತು. ಜೊತೆಗೆ, ಇಡೀ ರಾಜ್ಯದಲ್ಲಿ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಸಿಲಿಂಡರ್‍ಗಳನ್ನು ಪೂರೈಕೆ ಮಾಡುವ ಪ್ರಕ್ರಿಯೆ ಆರಂಭಿಸಿದ ಮೊಟ್ಟಮೊದಲ ಸರಕಾರೇತರ ಸಂಸ್ಥೆ ನಮ್ಮದು. ಈ ಸಂದರ್ಭದಲ್ಲಿ ಸಾಕಷ್ಟು ಅಡೆತಡೆಗಳು ಎದುರಾಯಿತು. ಆದರೆ, ಸಂಕಷ್ಟದ ಸಮಯದಲ್ಲಿ ಸಂತ್ರಸ್ತರ ನೆರವಿಗೆ ನಿಲ್ಲಬೇಕಾದ್ದು ನಮ್ಮ ಕರ್ತವ್ಯವಾಗಿತ್ತು. ಮುಂಬೈಯಲ್ಲಿ ಒಂದು ಮಸೀದಿಯಲ್ಲಿ ಆಕ್ಸಿಜನ್ ಸಿಲಿಂಡರ್‍ಗಳನ್ನು ಪೂರೈಸುತ್ತಿರುವ ಮಾಹಿತಿ ನಮಗೆ ಹೆಚ್ಚಿನ ಶಕ್ತಿ ನೀಡಿತು ಎಂದು ಅವರು ಹೇಳಿದರು.

ಆಕ್ಸಿಜನ್ ಸಿಲಿಂಡರ್‍ಗಳನ್ನು ಪ್ರತಿ ದಿನ ಹೊಸೂರು ಹಾಗೂ ಪೀಣ್ಯದಲ್ಲಿ ರಿಫಿಲ್ ಮಾಡಿಸಲಾಗುತ್ತಿತು. ಆಕ್ಸಿಜನ್ ಸಿಲಿಂಡರ್‍ಗಳಿಗೆ ತುಂಬಾ ಬೇಡಿಕೆ ಇತ್ತು. ಪರಿಸ್ಥಿತಿ ಯಾವ ರೀತಿ ಕೈ ಮೀರಿತ್ತು ಎಂದರೆ ನಮ್ಮ ನಾಸಿಹ್ ಪಬ್ಲಿಕ್ ಶಾಲೆಯ ಎದುರು ಆಕ್ಸಿಜನ್‍ಗಾಗಿ ಕಾದು ಕಾದು ಇಬ್ಬರು ಮೃತಪಟ್ಟಿದ್ದರು. ಈ ಘಟನೆ ನಮಗೆ ತುಂಬಾ ನೋವುಂಟು ಮಾಡಿತು. ಆನಂತರ, ಹಲವರ ಜೊತೆ ಚರ್ಚೆ ಮಾಡಿ ನಗರದ ವಿವಿಧ ಭಾಗಗಳಲ್ಲಿ ಆಕ್ಸಿಜನ್ ಸಿಲಿಂಡರ್ ಲಭ್ಯವಾಗುವಂತೆ ಕ್ರಮ ಕೈಗೊಂಡೆವು ಎಂದು ಮೌಲಾನ ಹೇಳಿದರು.

ಜೊತೆಗೆ ರೆಮ್‍ಡಿಸಿವಿರ್ ಚುಚ್ಚು ಮದ್ದುಗಾಗಿ ಬಹಳ ಬೇಡಿಕೆ ಇತ್ತು. ಆಸ್ಪತ್ರೆಯಲ್ಲಿ ಇದ್ದಂತಹ ರೋಗಿಗಳಿಗೂ ಅದನ್ನು ಖರೀದಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕೆಲವರು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು 15 ರಿಂದ 25 ಸಾವಿರ ರೂ.ವರೆಗೆ ಕಾಳ ಸಂತೆಯಲ್ಲಿ ಈ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದ ಸಂಗತಿಗಳು ವರದಿಯಾಗಿದ್ದವು. ಅದರ ಮೂಲ ಬೆಲೆ 4500 ರೂ.ಇತ್ತು. 450 ರೋಗಿಗಳಿಗೆ ತಲಾ 6 ವಯಲ್ಸ್‍ಗಳನ್ನು ಒದಗಿಸಿದೆವು. ಮತ್ತೊಂದು 40 ಸಾವಿರ ರೂ.ಬೆಲೆಯ ಇಂಜೆಕ್ಷನ್. ಪ್ರತಿ ರೋಗಿಗೆ ಎರಡು ವಯಲ್ಸ್(80 ಸಾವಿರ ರೂ.). ಅದರ ಎರಡು ವಯಲ್ಸ್ ಸುಮಾರು 40 ರೋಗಿಗಳಿಗೆ ಒದಗಿಸಿದೆವು ಎಂದು ಅವರು ತಿಳಿಸಿದರು.

ನಾವು ಉಚಿತವಾಗಿ ಔಷಧಿ ಪೂರೈಸುವ ರೋಗಿಗಳಲ್ಲಿ ಹಲವಾರು ಮಂದಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವರ್ಷದ ಡಿಸೆಂಬರ್‍ನಲ್ಲಿ ಈ ಬಗ್ಗೆ ಚರ್ಚೆ ಮಾಡಿ ಸಮುದಾಯದ ಸಹಭಾಗಿತ್ವದಲ್ಲಿ ಗುಣಮಟ್ಟದ ಡಯಾಲಿಸಿಸ್ ಕೇಂದ್ರ ಆರಂಭಿಸಲು ನಿರ್ಧರಿಸಿದೆವು. ಇದೀಗ ಆ ಕೇಂದ್ರ ಕಾರ್ಯಾರಂಭ ಮಾಡಿದೆ. ಕಡು ಬಡುವರಿಗೆ ಉಚಿತವಾಗಿ ಡಯಾಲಿಸಿಸ್ ಮಾಡುತ್ತಿದ್ದು, ಆರ್ಥಿಕವಾಗಿ ಸಬಲರಾಗಿರುವವರಿಗೆ 950 ರೂ.ಗಳ ದರ ನಿಗದಿ ಮಾಡಿದ್ದೇವೆ ಎಂದು ಮೌಲಾನ ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಜಮೀಯತುಲ್ ಉಲಮಾ ಸಂಘಟನೆ ವತಿಯಿಂದ ನಮಗೆ ಆಂಬ್ಯುಲೆನ್ಸ್ ಕೊಡಲಾಗಿತ್ತು. ನಮ್ಮ ಸಹಾಯವಾಣಿ ಬರುವ ಕರೆಗಳನ್ನು ಆಧರಿಸಿ ಈ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸಲಾಗುತ್ತಿತ್ತು. ಜೊತೆಗೆ, ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು ಅಗತ್ಯ ಇರುವವರಿಗೆ ಒದಗಿಸಲಾಯಿತು. ನಾವು ಮಾನವೀಯ ಸೇವೆಯ ಉದ್ದೇಶದಿಂದ ಈ ಕೆಲಸಗಳನ್ನು ಮಾಡಿದೆವು. ಆದುದರಿಂದ, ಮಾಧ್ಯಮಗಳ ಪ್ರಚಾರದಿಂದ ಅಂತರ ಕಾಯ್ದುಕೊಂಡೆವು ಎಂದು ಅವರು ಹೇಳಿದರು.

ನಮ್ಮ ಈ ಕೆಲಸದಲ್ಲಿ ನಾಸಿಹ್ ಫೌಂಡೇಶನ್‍ನ ಪ್ರಧಾನ ಕಾರ್ಯದರ್ಶಿ ಮುಫ್ತಿ ಅಸ್ಲಂ ರಶಾದಿ ಖಾಸ್ಮಿ, ಸೈಯ್ಯದ್ ಆಸಿಮ್ ಅಬ್ದುಲ್ಲಾ, ಸೈಯದ್ ಸಬೀಲ್, ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ, ಝಿಯಾವುಲ್ಲಾ ಖಾನ್, ಡಾ.ಶಫೀಕ್, ಡಾ.ತನ್ವೀರ್, ಡಾ.ಅಹ್ಮದ್ ಶರೀಫ್ ಸೇರಿದಂತೆ ಇನ್ನಿತರರು ಕೈ ಜೋಡಿಸಿದ್ದರು ಎಂದು ಮೌಲಾನ ಶಬ್ಬೀರ್ ಅಹ್ಮದ್ ನದ್ವಿ ಸ್ಮರಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News