ಬಡ್ತಿಗಳಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಕುರಿತು ತನ್ನ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂ ನಕಾರ

Update: 2021-09-14 15:23 GMT

ಹೊಸದಿಲ್ಲಿ, ಸೆ.14: ಪರಿಶಿಷ್ಟ ಜಾತಿಗಳು (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ)ಗಳಿಗೆ ಬಡ್ತಿಗಳಲ್ಲಿ ಮೀಸಲಾತಿಯನ್ನು ಒದಗಿಸಿರುವ ತನ್ನ ತೀರ್ಪನ್ನು ಮರುಪರಿಶೀಲಿಸುವುದಿಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಿದ ಸರ್ವೋಚ್ಚ ನ್ಯಾಯಾಲಯವು, ಅದನ್ನು ಹೇಗೆ ಅನುಷ್ಠಾನಿಸಬೇಕು ಎನ್ನುವುದನ್ನು ರಾಜ್ಯಗಳೇ ತೀರ್ಮಾನಿಸಬೇಕು ಎಂದು ಹೇಳಿತು. 

ವಿವಿಧ ರಾಜ್ಯಗಳಲ್ಲಿ ಎಸ್ಸಿ ಮತ್ತು ಎಸ್ಟಿಗಳಿಗೆ ಬಡ್ತಿಗಳಲ್ಲಿ ಮೀಸಲಾತಿಯನ್ನು ನೀಡುವುದಕ್ಕೆ ಎದುರಾಗಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾ.ನಾಗೇಶ್ವರ ರಾವ್ ನೇತೃತ್ವದ ಪೀಠವು, ಮೀಸಲಾತಿ ನೀಡುವಲ್ಲಿ ರಾಜ್ಯಗಳು ಎದುರಿಸುತ್ತಿರುವ ವಿಶಿಷ್ಟ ಸಮಸ್ಯೆಗಳನ್ನು ಗುರುತಿಸುವಂತೆ ಮತ್ತು ಎರಡು ವಾರಗಳಲ್ಲಿ ಅವುಗಳನ್ನು ತನಗೆ ಸಲ್ಲಿಸುವಂತೆ ರಾಜ್ಯ ಸರಕಾರಗಳ ಪರ ವಕೀಲರಿಗೆ ನಿರ್ದೇಶ ನೀಡಿತು.

‘ನಾಗರಾಜ ಅಥವಾ ಜರ್ನೈಲ್ ಸಿಂಗ್ ಪ್ರಕರಣಗಳನ್ನು ಮತ್ತೆ ವಿಚಾರಣೆಗಾಗಿ ಕೈಗೆತ್ತಿಕೊಳ್ಳುವುದಿಲ್ಲ ಎನ್ನುವುದನ್ನು ನಾವು ಅತ್ಯಂತ ಸ್ಪಷ್ಟವಾಗಿ ತಿಳಿಸುತ್ತಿದ್ದೇವೆ,ಏಕೆಂದರೆ ಈ ಪ್ರಕರಣಗಳು ನ್ಯಾಯಾಲಯವು ಹೇಳಿದ್ದ ಕಾನೂನಿಗೆ ಅನುಗುಣವಾಗಿವೆಯೇ ಎನ್ನುವುದನ್ನು ನಿರ್ಧರಿಸುವುದು ಮಾತ್ರ ನಮ್ಮ ಉದ್ದೇಶವಾಗಿತ್ತು’ ಎಂದು ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ಬಿ.ಆರ್.ಗವಾಯಿ ಅವರನ್ನೂ ಒಳಗೊಂಡಿದ್ದ ಪೀಠವು ತಿಳಿಸಿತು.

ನ್ಯಾಯಾಲಯವು ಈ ವಿಷಯದಲ್ಲಿ ಮುಂದುವರಿಯಲು ತಮಗೆ ವಿಶಿಷ್ಟವಾಗಿರುವ ಸಮಸ್ಯೆಗಳನ್ನು ಅಂತಿಮಗೊಳಿಸುವಂತೆ ರಾಜ್ಯ ಸರಕಾರಗಳಿಗೆ ತನ್ನ ಹಿಂದಿನ ಆದೇಶದಲ್ಲಿ ನಿರ್ದೇಶ ನೀಡಿತ್ತು ಎಂದು ಬೆಟ್ಟುಮಾಡಿದ ಪೀಠವು,‘ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಮತ್ತು ಇತರರು ಎತ್ತಿರುವ ಅಂಶಗಳು ಪ್ರಕರಣಗಳ ವ್ಯಾಪ್ತಿಯನ್ನು ಹೆಚ್ಚಿಸುತ್ತವೆ. ನಾವು ಅದಕ್ಕೆ ಸಿದ್ಧರಿಲ್ಲ. ನಾಗರಾಜ ಪ್ರಕರಣದಲ್ಲಿ ಈಗಾಗಲೇ ಕೆಲವು ವಿಷಯಗಳನ್ನು ಇತ್ಯರ್ಥಗೊಳಿಸಲಾಗಿದೆ ಮತ್ತು ಅವುಗಳನ್ನೂ ನಾವು ಕೈಗೆತ್ತಿಕೊಳ್ಳುವುದಿಲ್ಲ. ಪ್ರಕರಣಗಳನ್ನು ಪುನಃ ತೆರೆಯಬೇಕೆಂಬ ಯಾವುದೇ ವಾದಗಳಿಗೆ ಅಥವಾ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಹೇಳಲಾದ ಕಾನೂನು ದೋಷಯುಕ್ತವಾಗಿದೆ ಎಂದು ವಾದಿಸಲು ನಾವು ಅನುಮತಿಯನ್ನು ನೀಡುವುದಿಲ್ಲ. ಏಕೆಂದರೆ ಈ ನ್ಯಾಯಾಲಯವು ವಿಧಿಸಿದ್ದ ಕಾನೂನನ್ನು ಅನ್ವಯಿಸುವುದು ಈ ಪ್ರಕರಣಗಳ ವಿಚಾರಣೆಯಲ್ಲಿಯ ಮುಖ್ಯ ಉದ್ದೇಶವಾಗಿತ್ತು ’ ಎಂದು ಹೇಳಿತು.
 
ಈ ಎಲ್ಲ ವಿಷಯಗಳು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳಲ್ಲಿ ಅಡಕವಾಗಿವೆ ಮತ್ತು ಇಂದಿರಾ ಸಾಹ್ನಿ ಪ್ರಕರಣದಿಂದೀಚಿಗೆ ಮೀಸಲಾತಿ ವಿಷಯ ಕುರಿತು ಎಲ್ಲ ಪ್ರಕರಣಗಳ ಹಿನ್ನೆಲೆಯನ್ನು ತಾನು ಒದಗಿಸುವುದಾಗಿ ವೇಣುಗೋಪಾಲ ನ್ಯಾಯಾಲಯಕ್ಕೆ ನಿವೇದಿಸಿಕೊಂಡರೆ,ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು,ಯಾವ ಗುಂಪುಗಳು ಹಿಂದುಳಿದಿವೆ ಎನ್ನುವುದನ್ನು ರಾಜ್ಯವು ಹೇಗೆ ನಿರ್ಧರಿಸುತ್ತದೆ ಎನ್ನುವುದರ ಕುರಿತು ಮಾನದಂಡಗಳ ಸಮಸ್ಯೆಯಿದೆ ಎಂದು ವಾದಿಸಿದರು.
 
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು,‘ಸರಕಾರಗಳು ಏನು ಮಾಡಬೇಕು ಎಂದು ಸಲಹೆ ನೀಡುವುದು ನಮ್ಮ ಕೆಲಸವಲ್ಲ. ನೀತಿಯನ್ನು ಹೇಗೆ ಜಾರಿಗೊಳಿಸಬೇಕು ಎಂದು ಸರಕಾರಗಳಿಗೆ ಹೇಳುವುದೂ ನಮ್ಮ ಕೆಲಸವಲ್ಲ. ಅದನ್ನು ರಾಜ್ಯಗಳು ಹೇಗೆ ಜಾರಿಗೊಳಿಸಬೇಕು ಮತ್ತು ಹಿಂದುಳಿದಿರುವಿಕೆ ಹಾಗೂ ಪ್ರಾತಿನಿಧ್ಯವನ್ನು ಹೇಗೆ ಪರಿಗಣಿಸಬೇಕು ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಲಾಗಿದೆ. ನ್ಯಾಯಾಂಗ ಪರಾಮರ್ಶೆಗೆ ಒಳಪಟ್ಟು ಏನನ್ನು ಮಾಡಬೇಕು ಎನ್ನುವುದನ್ನು ರಾಜ್ಯಗಳೇ ನಿರ್ಧರಿಸಬೇಕು ’ಎಂದು ಹೇಳಿತು.

ರಾಜ್ಯ ಸರಕಾರಗಳ ಪರ ವಕೀಲರು ಮುಂದಿಟ್ಟ ವಾದಗಳನ್ನು ಆಲಿಸಿದ ನ್ಯಾಯಾಲಯವು,ಹಿಂದುಳಿದಿರುವಿಕೆಯನ್ನು ಹೇಗೆ ಪರಿಗಣಿಸಬೇಕು ಎಂಬ ಬಗ್ಗೆ ತಾನು ಈಗಾಗಲೇ ಆದೇಶವನ್ನು ಹೊರಡಿಸಿದ್ದೇನೆ ಮತ್ತು ನೀತಿಯನ್ನು ಇನ್ನಷ್ಟು ವಿಷದೀಕರಿಸುವುದಿಲ್ಲ ಎಂದು ತಿಳಿಸಿತು.

2018ರಲ್ಲಿ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಎಸ್ಸಿ ಮತ್ತು ಎಸ್ಟಿಗಳಿಗೆ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಗೆ ಮಾರ್ಗವನ್ನು ಸುಗಮಗೊಳಿಸಿದ್ದು, ಈ ಸಮುದಾಯಗಳಲ್ಲಿ ಹಿಂದುಳಿದಿರುವಿಕೆಯನ್ನು ಪ್ರತಿಬಿಂಬಿಸಲು ರಾಜ್ಯಗಳು ಪರಿಮಾಣಾತ್ಮಕ ಮಾಹಿತಿಗಳನ್ನು ಸಂಗ್ರಹಿಸುವ ಅಗತ್ಯವಿಲ್ಲ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News