ಭಾರತ ನೇತೃತ್ವದ ಸೌರ ಒಕ್ಕೂಟ ಸೇರಿಕೊಳ್ಳುವ ಬಗ್ಗೆ ಶೀಘ್ರ ನಿರ್ಧಾರ: ಅಮೆರಿಕ

Update: 2021-09-15 17:07 GMT
photo: twitter.com/JohnKerry

ವಾಶಿಂಗ್ಟನ್, ಸೆ.15: ಭಾರತ ನೇತೃತ್ವದ ಅಂತರ್ ರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸೇರಬೇಕೇ ಎಂಬ ಬಗ್ಗೆ ಕೆಲ ವಾರಗಳಲ್ಲೇ ನಿರ್ಧರಿಸಲಾಗುವುದು ಎಂದು ಹವಾಮಾನ ಕುರಿತ ಅಮೆರಿಕದ ವಿಶೇಷ ಪ್ರತಿನಿಧಿ ಜಾನ್ ಕೆರ್ರೀ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಸ್ಕಾಟ್ಲ್ಯಾಂಡ್ನ ಗ್ಲಾಸ್ಗೋ ನಗರದಲ್ಲಿ ಅಕ್ಟೋಬರ್ 31ರಿಂದ ಹವಾಮಾನ ಬದಲಾವಣೆ ವಿಷಯದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಮಾವೇಶಕ್ಕೂ ಮುನ್ನ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದವರು ಹೇಳಿದ್ದಾರೆ.

 ‌
ನಿವ್ವಳ ಶೂನ್ಯ ಇಂಗಾಲ ಹೊರಸೂಸುವ ದೇಶವಾಗಿರುವಂತೆ ಭಾರತವನ್ನು ಆಗ್ರಹಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಕೆರ್ರೀ, ಇಲ್ಲಿರುವ ಸಮಸ್ಯೆಯೆಂದರೆ , ಪ್ರಕೃತಿ ಮಾತೆ ಇದು ಭಾರತದ ಅನಿಲ ಅಥವಾ ಚೀನಾದ ಅನಿಲ ಎಂದು ಪರಿಗಣಿಸುವುದಿಲ್ಲ. ಪರಿಸರವನ್ನು ಸೇರಿಕೊಳ್ಳುವ ಒಟ್ಟು ಅನಿಲದ ಪ್ರಮಾಣವನ್ನು ಇಲ್ಲಿ ಗಮನಿಸಬೇಕಾಗಿದೆ . ಕೇವಲ ಒಂದು ದೇಶ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಗೊಳಿಸಿದ ಮಾತ್ರಕ್ಕೆ ಪರಿಸರ ಬದಲಾವಣೆ ಸಮಸ್ಯೆ ಪರಿಹಾರವಾಗದು ಎಂದರು.

ಪ್ಯಾರಿಸ್ ಒಪ್ಪಂದದ ಪ್ರಕಾರ, ಭಾರತವು ಜಿಡಿಪಿಯ ಪ್ರತೀ ಅಂಶದ ಮೇಲಿನ ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಮಾಣವನ್ನು 2030ರ ವೇಳೆಗೆ 33ರಿಂದ 35%ದಷ್ಟು ಕಡಿಮೆಗೊಳಿಸಬೇಕಿದೆ. ಈ ಗುರಿಯನ್ನು ಸಾಧಿಸುವ ವಿಶ್ವಾಸವಿದೆ ಎಂದು ಜುಲೈ 15ರಂದು ಭಾರತದ ಇಂಧನ ಸಚಿವ ಆರ್ಕೆ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಬಗ್ಗೆ ಅಕ್ಟೋಬರ್ 31ರ ಗ್ಲಾಸ್ಗೋ ಸಮಾವೇಶದಲ್ಲಿ ಘೋಷಣೆ ಮಾಡಬೇಕೆಂದು ಭಾರತ ಸರಕಾರವನ್ನು ಆಗ್ರಹಿಸುತ್ತೇವೆ. ಇದು ಅತ್ಯಂತ ತುರ್ತು ಕಾರ್ಯವಾಗಿದೆ. ಭಾರತ ತನ್ನ ಗುರಿ ಸಾಧಿಸಬೇಕಿದ್ದರೆ ಆಂತರಿಕ ಚರ್ಚೆ ಮತ್ತು ಪ್ರಧಾನಮಂತ್ರಿ ತನ್ನ ಪರಮಾಧಿಕಾರ ಬಳಸುವ ಅಗತ್ಯವಿದೆ ಎಂದು ಮಂಗಳವಾರ ಕೆರ್ರೀ ಹೇಳಿದ್ದರು.

ಅಂತರಾಷ್ಟ್ರೀಯ ಸೌರ ಒಕ್ಕೂಟವು ಉತ್ತರ ಅಕ್ಷಾಂಶ ಮತ್ತು ದಕ್ಷಿಣ ಅಕ್ಷಾಂಶ ರೇಖೆಯಲ್ಲಿನ , ಅತೀ ಹೆಚ್ಚು ಸೂರ್ಯನ ಕಿರಣ ಬೀಳುವ ಪ್ರದೇಶದ ವ್ಯಾಪ್ತಿಯಲ್ಲಿರುವ 124 ದೇಶಗಳ ಒಪ್ಪಂದ ಆಧಾರಿತ ಮೈತ್ರಿಕೂಟವಾಗಿದೆ. ಪರಿಸರ ಬದಲಾವಣೆ ಸಮಸ್ಯೆ ಎದುರಿಸುವ ನಿಟ್ಟಿನಲ್ಲಿ ಪಳೆಯುಳಿಕೆ ಇಂಧನದ ಬಳಕೆ ಕಡಿಮೆಗೊಳಿಸಿ ಸೌರಶಕ್ತಿಯ ಬಳಕೆಯನ್ನು ಪ್ರೋತ್ಸಾಹಿಸುವ ಕುರಿತ ಒಪ್ಪಂದ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News