ಒಕ್ಕೂಟ ಸರಕಾರದ ವರ್ತನೆ ಸಂಶಯಾಸ್ಪದ

Update: 2021-09-17 09:21 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪೆಗಾಸಸ್ ಸ್ಪೈವೇರ್ ಬಳಸಿ ಬೇಹುಗಾರಿಕೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ಪ್ರಮಾಣಪತ್ರ ಸಲ್ಲಿಸಲು ನಿರಾಕರಿಸಿರುವ ಒಕ್ಕೂಟ ಸರಕಾರದ ನಡೆಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್‌ನ ಅಸಮಾಧಾನದಲ್ಲಿ ಅಸಹಜವಾದುದೇನೂ ಇಲ್ಲ. ಒಕ್ಕೂಟ ಸರಕಾರ ಏನನ್ನೋ ಮುಚ್ಚಿಡಲು ಯತ್ನಿಸುತ್ತಿದೆ ಎಂಬ ಭಾವನೆ ನ್ಯಾಯಾಧೀಶರಲ್ಲಿ ಮೂಡಿದ್ದರೆ ಅಚ್ಚರಿ ಪಡಬೇಕಾಗಿಲ್ಲ. ಸರಕಾರದ ಸಂಸ್ಥೆಗಳು ವಿವಿಧ ಜನವರ್ಗಗಳ ವ್ಯಕ್ತಿಗಳ ಮೇಲೆ ಇಸ್ರೇಲ್ ನಿರ್ಮಿತ ಸ್ಪೈವೇರ್‌ನ್ನು ಬಳಸಿ ಬೇಹುಗಾರಿಕೆ ನಡೆಸಿರುವ ಆರೋಪದ ಬಗ್ಗೆ ಸ್ವತಂತ್ರ ತನಿಖೆಯನ್ನು ನಡೆಸಬೇಕೆಂದು ಕೋರಿ ಸಲ್ಲಿಸಲ್ಪಟ್ಟಿರುವ ಹಲವಾರು ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ನೇತೃತ್ವದ ಪೀಠವು ಕೈಗೆತ್ತಿಕೊಂಡು ''ಬೇಹುಗಾರಿಕೆ ನಡೆದಿದೆಯೇ ಇಲ್ಲವೇ ಎಂಬುದನ್ನು ಬಹಿರಂಗ ಪಡಿಸುವ ವಿಚಾರದಲ್ಲಿ ಮೀನ ಮೇಷ ಎಣಿಸುವುದರಿಂದ ಯಾವ ಪ್ರಯೋಜನವೂ ಇಲ್ಲ'' ಎಂದು ಸ್ಪಷ್ಟವಾಗಿ ಹೇಳಿದೆ.

ಪೆಗಾಸಸ್ ಬೇಹುಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಕೇಳಿದರೂ ರಾಷ್ಟ್ರೀಯ ಭದ್ರತೆಯ ನೆಪವನ್ನು ಮುಂದೆ ಮಾಡಿ ಮಾಹಿತಿ ನೀಡಲು ನಿರಾಕರಿಸಿದ ಸರಕಾರದ ವರ್ತನೆಯಿಂದ ಸುಪ್ರೀಂ ಕೋರ್ಟ್ ಅಸಮಾಧಾನಗೊಂಡಿದೆ. ಈ ವಿಷಯದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ವರ್ತನೆ ಪಾರದರ್ಶಕವಾಗಿಲ್ಲ. ಇಸ್ರೇಲ್ ಕಂಪೆನಿ ನಿರ್ಮಿತ ಹ್ಯಾಕಿಂಗ್ ಸಾಫ್ಟ್‌ವೇರ್ ಪೆಗಾಸಸ್‌ನ್ನು ಮುನ್ನೂರಕ್ಕೂ ಹೆಚ್ಚು ಪತ್ರಕರ್ತರು, ಜನಪರ ಹೋರಾಟಗಾರರು ಮತ್ತು ವಿರೋಧ ಪಕ್ಷಗಳ ನಾಯಕರ ಮೊಬೈಲ್‌ಗಳಲ್ಲಿ ಗುಟ್ಟಾಗಿ ಅಳವಡಿಸಿ ಅವರೆಲ್ಲರ ಮೊಬೈಲ್ ಸಂಭಾಷಣೆಯನ್ನು ಕದ್ದಾಲಿಕೆ ಮಾಡಿರುವುದು, ಮಾಹಿತಿಯನ್ನು ಲಪಟಾಯಿಸಿರುವುದು ಐದಾರು ತಿಂಗಳ ಹಿಂದೆ ಬೆಳಕಿಗೆ ಬಂದಿರುವುದು ಈಗ ಗುಟ್ಟಿನ ಸಂಗತಿಯಾಗಿ ಉಳಿದಿಲ್ಲ. ಇದು ಬೆಳಕಿಗೆ ಬಂದ ಆನಂತರ ಸ್ವತಂತ್ರ ತನಿಖೆಗೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಆದರೆ ಸರಕಾರ ಈ ಬಗ್ಗೆ ಯಾವುದೇ ಹೇಳಿಕೆ ನೀಡದೆ ಉದ್ದೇಶ ಪೂರ್ವಕವಾಗಿ ಮೌನ ತಾಳಿತು. ಸುಪ್ರೀಂ ಕೋರ್ಟ್‌ಗೆ ಸಂಕ್ಷಿಪ್ತ ಪ್ರಮಾಣ ಪತ್ರವನ್ನು ಸಲ್ಲಿಸಿ ''ಕದ್ದಾಲಿಕೆ ನಡೆದಿಲ್ಲ ಮುಚ್ಚಿಡುವಂತಹದ್ದೇನೂ ಇಲ್ಲ'' ಎಂದು ಜಾರಿಕೊಂಡಿತು. ಆದರೆ ಇಷ್ಟಕ್ಕೆ ಸುಮ್ಮನಾಗದೆ ಸುಪ್ರೀಂ ಕೋರ್ಟ್ ವಿವರವಾದ ಪ್ರಮಾಣಪತ್ರವನ್ನು ಸಲ್ಲಿಸಲು ಕೇಳಿತು. ಆದರೆ ರಾಷ್ಟ್ರೀಯ ಭದ್ರತೆಯ ನೆಪ ಹೇಳಿ ವಿವರವಾದ ಪ್ರಮಾಣ ಪತ್ರ ಸಲ್ಲಿಸಲು ಮೋದಿ ಸರಕಾರ ನಿರಾಕರಿಸಿರುವುದು ಮತ್ತಷ್ಟು ಸಂದೇಹಕ್ಕೆ ಕಾರಣವಾಗಿದೆ.

ಪೆಗಾಸಸ್ ಬೇಹುಗಾರಿಕೆ ವಿಷಯದಲ್ಲಿ ಒಕ್ಕೂಟ ಸರಕಾರದ ನಡೆ ಪಾರದರ್ಶವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಎಲ್ಲದಕ್ಕೂ ದೇಶದ ಭದ್ರತೆಯ ನೆಪ ಮುಂದೆ ಮಾಡಿ ಸಾರ್ವಜನಿಕರಿಂದ ರಾಷ್ಟ್ರೀಯ ಮಹತ್ವದ ವಿಷಯವನ್ನು ಬಚ್ಚಿಡುವುದು ಸರಿಯಲ್ಲ. ಮೊದಲು ಸುಪ್ರೀಂ ಕೋರ್ಟಿನ ಮುಂದೆ ವಿವರವಾದ ಪ್ರಮಾಣಪತ್ರವನ್ನು ಸಲ್ಲಿಸುವುದಾಗಿ ಮಾತು ಕೊಟ್ಟ ಒಕ್ಕೂಟ ಸರಕಾರ ನಂತರ ಹಿಂದೆ ಸರಿದಿದ್ದೇಕೆ? ವಿವರವಾದ ಪ್ರಮಾಣಪತ್ರವನ್ನು ಸಲ್ಲಿಸಲು ಯಾಕೆ ಹಿಂದೇಟು ಹಾಕುತ್ತಿದೆ? ಈ ಹಿಂದೆ ಪೆಗಾಸಸ್ ಒಡೆತನದ ಕಂಪೆನಿ ಹೇಳಿದ ಪ್ರಕಾರ ಅದು ಮಾರಾಟ ಮಾಡುವ ತಂತ್ರಜ್ಞಾನ ಮಿಲಿಯನ್ ಡಾಲರ್ ಬೆಲೆ ಬಾಳುವಂತಹದ್ದು. ಸಾಮಾನ್ಯರು ಇದನ್ನು ಕೊಳ್ಳಲು ಸಾಧ್ಯವಿಲ್ಲ. ಸರಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಬೇಹುಗಾರಿಕೆಗೆ ಒಳಗಾಗುವವರು ಭಯೋತ್ಪಾದಕರಲ್ಲ, ಪ್ರತ್ಯೇಕವಾದಿಗಳಲ್ಲ, ನಕ್ಸಲೀಯರಲ್ಲ. ಬದಲಾಗಿ ಜನಪರ ಹೋರಾಟಗಾರರು, ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾಗಿರುವವರು, ಪ್ರತಿಪಕ್ಷ ನಾಯಕರು, ಹಿರಿಯ ಪತ್ರಕರ್ತರು ಮಾತ್ರ.ಇವರ ಮೇಲೆ ಬೇಹುಗಾರಿಕೆ ನಡೆಸುವ ಅನಿವಾರ್ಯತೆಯಾಗಲಿ ಅಗತ್ಯವಾಗಲಿ ಸರಕಾರಕ್ಕೆ ಇದೆಯೇ? ಇದು ವ್ಯಕ್ತಿಗಳ ಖಾಸಗೀತನದ ಮೇಲೆ ಪ್ರಭುತ್ವ ನಡೆಸಿರುವ ದಾಳಿಯಲ್ಲದೆ ಮತ್ತೇನೂ ಅಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಭಾರತದಲ್ಲಿ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆ. ಜನರಿಂದ ಚುನಾಯಿಸಲ್ಪಟ್ಟಿರುವ ಸರಕಾರ ಇಲ್ಲಿದೆ. ದೇಶದ ಭದ್ರತೆಗೆ ಉಗ್ರಗಾಮಿಗಳು, ನಕ್ಸಲೀಯರು, ಪ್ರತ್ಯೇಕವಾದಿಗಳಿಂದ ಅಪಾಯ ಎದುರಾದರೆ ಅಂತಹ ಅಪರಾಧಗಳ ತನಿಖೆಯನ್ನು ನಡೆಸಲು ತನಿಖಾ ಸಂಸ್ಥೆಗಳಿವೆ. ಅತ್ಯಾಧುನಿಕವಾದ ಸೈಬರ್ ಕಣ್ಗಾವಲು ವ್ಯವಸ್ಥೆ ಇಲ್ಲಿದೆ. ಕಾನೂನು ಸುವ್ಯವಸ್ಥೆ ಪಾಲನೆಯ ಬಗ್ಗೆ ಕೈಗೊಳ್ಳುವ ಕ್ರಮದ ಬಗ್ಗೆ ತಕರಾರಿಲ್ಲ. ಆದರೆ ರಾಜಕೀಯ ವಿರೋಧಿಗಳನ್ನು, ಜನಪರ ಹೋರಾಟಗಾರರನ್ನು, ಪತ್ರಕರ್ತರನ್ನು ಹತ್ತಿಕ್ಕಲು ಪೆಗಾಸಸ್ ತಂತ್ರಜ್ಞಾನ ಬಳಸಿ ಬೇಹುಗಾರಿಕೆ ನಡೆಸುವುದು ನಿರಂಕುಶ ಸರ್ವಾಧಿಕಾರಿ ವರ್ತನೆಯಲ್ಲದೆ ಬೇರೇನೂ ಅಲ್ಲ. ಈಗಾಗಲೇ ಸರಕಾರ ಕಾನೂನನ್ನು ದುರುಪಯೋಗ ಮಾಡಿಕೊಂಡು ಇಪ್ಪತ್ತಕ್ಕೂ ಹೆಚ್ಚು ಜನಪರ ಚಿಂತಕರನ್ನು ಯಾವುದೇ ವಿಚಾರಣೆಯಿಲ್ಲದೆ ಸೆರೆಮನೆಗೆ ತಳ್ಳಿ ಎರಡು ವರ್ಷಗಳಾದವು. ಸರಕಾರದ ನಿಲುವು, ಧೋರಣೆಗಳನ್ನು ಪ್ರಶ್ನಿಸುವವರನ್ನೆಲ್ಲ ದೇಶದ್ರೋಹದ ಆರೋಪದ ಮೇಲೆ ಜೈಲಿಗೆ ತಳ್ಳುವುದು ಜನತಂತ್ರಕ್ಕೆ ಮಾಡುವ ಅಪಚಾರವಲ್ಲದೆ ಬೇರೇನೂ ಅಲ್ಲ. ರಾಷ್ಟ್ರೀಯ ಭದ್ರತೆ ಎಷ್ಟು ಮುಖ್ಯವೋ ಪ್ರಜೆಗಳ ಖಾಸಗಿತನದ ರಕ್ಷಣೆಯೂ ಅಷ್ಟೇ ಮುಖ್ಯವಾಗಿದೆ. ಇಂತಹ ವಿಷಯದಲ್ಲಿ ಸರಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.

ಇಸ್ರೇಲ್‌ನ ಪೆಗಾಸಸ್ ತಂತ್ರಜ್ಞಾನವನ್ನು ಬಳಸಿಕೊಂಡು ಬೇಹುಗಾರಿಕೆಗೆ ಒಳಗಾದ ಭಾರತೀಯರಲ್ಲಿ, ಪ್ರತಿಪಕ್ಷ ನಾಯಕರು ಹಾಗೂ ಹೋರಾಟಗಾರರು, ಪತ್ರಕರ್ತರು ಮಾತ್ರವಲ್ಲ, ಕೆಲವು ಮಂತ್ರಿಗಳೂ ಇದ್ದಾರೆ. ಆಡಳಿತ ಪಕ್ಷದೊಳಗಿನ ಭಿನ್ನಮತೀಯರೂ ಇದ್ದಾರೆ ಎಂಬುದು ಗಮನಾರ್ಹ. ಇಂತಹ ಸೂಕ್ಷ್ಮವಿಷಯದಲ್ಲಿ ಒಕ್ಕೂಟ ಸರಕಾರದ ನಡೆ ಪಾರದರ್ಶಕವಾಗಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News