ಬಂದೀಖಾನೆಗಳ ಅಭಿವೃದ್ಧಿ ಮಂಡಳಿ ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಧ್ವನಿಮತದ ಒಪ್ಪಿಗೆ

Update: 2021-09-17 15:06 GMT

ಬೆಂಗಳೂರು, ಸೆ. 17: `ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ-2021' ಹಾಗೂ `ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ-2021'ನ್ನು ವಿಧಾನಸಭೆಯಲ್ಲಿ ಧ್ವನಿಮತದ ಅಂಗೀಕಾರ ನೀಡಲಾಯಿತು.

ಶುಕ್ರವಾರ ವಿಧಾನಸಭೆಯಲ್ಲಿ ಶಾಸನ ರಚನಾ ಕಲಾಪದಲ್ಲಿ ಸುದೀರ್ಘ ಚರ್ಚೆಯ ಬಳಿಕ ಎರಡು ವಿಧೇಯಕಗಳನ್ನು ಧ್ವನಿಮತದ ಮೂಲಕ ಅಂಗೀಕಾರ ಕೊಡಲಾಯಿತು. ಅಪರಾಧ ಕೃತ್ಯಗಳನ್ನು ತಡೆಗಟ್ಟುವ ದೃಷ್ಟಿಯಿಂದ ಶಿಕ್ಷೆಗೆ ಒಳಗಾಗಿರುವ ಬಂಧಿಗಳ ರಕ್ತದ ಮಾದರಿ, ಡಿಎನ್‍ಎ ಮಾದರಿ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿನ ಮಾದರಿ ಸಂಗ್ರಹಿಸುವುದು.

ಅಲ್ಲದೆ, ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟರ್ ಜೊತೆಗೆ ಎಸ್ಸಿ ಅಥವಾ ಡಿಸಿಪಿ ಅವರಿಗೆ ಈ ಮಾದರಿ ಸಂಗ್ರಹಿಸುವ ಅಧಿಕಾರವನ್ನು ಉದ್ದೇಶಿತ ವಿಧೇಯಕ ನೀಡಿದ್ದು, ಹತ್ತು ವರ್ಷಗಳ ಬಳಿಕ ಸೂಕ್ತ ನಿರ್ದೇಶನದೊಂದಿಗೆ ಅವುಗಳನ್ನು ನಾಶಪಡಿಸಲು ಎಸ್ಪಿ ಅಥವಾ ಡಿಸಿಪಿಗಳಿಗೆ ಅಧಿಕಾರ ನೀಡಲಾಗುವುದು ಎಂದು ಉಲ್ಲೇಖಿಸಲಾಗಿದೆ.

`ಆಧಾರ್' ಇದೆಯಲ್ವೇ..: ವಿಧೇಯಕದ ಮೇಲೆ ಮಾತನಾಡಿದ ಕಾಂಗ್ರೆಸ್ ಸದಸ್ಯ ತನ್ವೀರ್ ಸೇಠ್, ಈಗಾಗಲೇ ಆಧಾರ್ ಕಾರ್ಡ್‍ನಲ್ಲಿ ಈ ಎಲ್ಲ ಮಾದರಿಗಳನ್ನು ಸಂಗ್ರಹಿಸಿದ ಬಳಿಕ ಮತ್ತೊಮ್ಮೆ ಅಪರಾಧಿಗಳಿಂದ ಇವುಗಳನ್ನು ಸಂಗ್ರಹಿಸುವ ಅಗತ್ಯವೇನಿದೆ' ಎಂದು ಪ್ರಶ್ನಿಸಿದರು. 

ಅಪರಾಧ ಕೃತ್ಯಗಳ ವೈಜ್ಞಾನಿಕ ವಿಶ್ಲೇಷಣೆಗೆ ವಿಧಿ ವಿಜ್ಞಾನ ಪ್ರಯೋಗಾಲಯ ಸಹಿತ ಅಗತ್ಯ ಮೂಲಭೂತ ಸೌಲಭ್ಯಗಳು, ಆ ನಿಟ್ಟಿನಲ್ಲಿ ತಾಂತ್ರಿಕ ಸಿದ್ಧತೆಯೇ ಇಲ್ಲದೆ ವಿಧೇಯಕ ತಂದರೆ ಪ್ರಯೋಜನ ಆಗಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಕೇಳಿದರು.
ಇದಕ್ಕೆ ಧ್ವನಿಗೂಡಿಸಿದ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ರಾಜ್ಯದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಗಳಿಲ್ಲದೆ ಹೈದರಾಬಾದ್, ಕೊಲ್ಕತ್ತಾ ಸಹಿತ ವಿವಿಧ ರಾಜ್ಯಗಳಿಗೆ ಮಾದರಿಗಳನ್ನು ರವಾನೆ ಮಾಡುತ್ತಿದ್ದು, ಅಪರಾದ ಕೃತ್ಯಗಳ ತನಿಖೆ, ಪತ್ತೆ ಕಾರ್ಯವು ವಿಳಂಬವಾಗುತ್ತದೆ ಎಂದು ಗಮನ ಸೆಳೆದರು.

ಸದಸ್ಯರ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಸಚಿವ ಆರಗ ಜ್ಞಾನೇಂದ್ರ, `ಬೆಂಗಳೂರಿನಲ್ಲಿ ಕ್ರಿಮಿನಲ್ ಟ್ರ್ಯಾಕಿಂಗ್ ವ್ಯವಸ್ಥೆಯಡಿ ಶಿಕ್ಷೆಗೆ ಒಳಗಾಗಿರುವ ಕೈದಿಗಳ ಮಾದರಿಗಳನ್ನು ಸಂಗ್ರಹಿಸುತ್ತೇವೆ. ಇದರಿಂದ ಪದೇಪದೇ ಅಪರಾಧ ಕೃತ್ಯಗಳನ್ನು ಪಾಲ್ಗೊಳ್ಳುವವರನ್ನು ಗುರುತಿಸಲು ಅನುಕೂಲವಾಗಲಿದೆ' ಎಂದರು.

ಕೈದಿ ಆಗಿದ್ದ ಅನುಭವ ನನಗಿದೆ: `ಬಂದಿಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ ತರುವ ಅಗತ್ಯವೇನಿದೆ ಎಂದು ಹಲವು ಸದಸ್ಯರು ನನ್ನನ್ನು ಪ್ರಶ್ನಿಸಿದ್ದಾರೆ. ಆದರೆ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೂರ್ನಾಲ್ಕು ತಿಂಗಳುಗಳ ಕಾಲ ಜೈಲಿನಲ್ಲಿದ್ದ ಅನುಭವ ನನಗಿದೆ. ಬಹಳಷ್ಟು ಮಂದಿ ಹೊರಗಿನಿಂದ ಜೈಲನ್ನು ನೋಡಿ, ಕೇಳಿದ್ದಾರೆ. ಆದರೆ, ನಾನು ಕಾರಾಗೃಹದಲ್ಲಿದ್ದು ಬಂದಿದ್ದೆ. ಅಲ್ಲದೆ, ಜೈಲುಗಳ ಸುಧಾರಣೆಗಾಗಿ ಅನುಭವದ ಹಿನ್ನೆಲೆಯಲ್ಲಿ ಈ ವಿಧೇಯಕ ಮಂಡಿಸಿದ್ದೇನೆ' ಎಂದು ಆರಗ ಜ್ಞಾನೇಂದ್ರ ವಿವರಣೆ ನೀಡಿದರು.

ಕೈದಿಗಳ ಮನಃಪರಿವರ್ತನೆ ಆಗಬೇಕು. ಅವರಲ್ಲಿನ ಕೌಶಲ್ಯ ವೃದ್ಧಿಯ ಜೊತೆಗೆ ಅವರು ಹೆಚ್ಚಿನ ಆದಾಯ ಗಳಿಸುವಂತೆ ಆಗಬೇಕು. ಜೊತೆಗೆ ಅವರು ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ದೊರಕಿಸಿಕೊಡಬೇಕು. ಆ ನಿಟ್ಟಿನಲ್ಲಿ ಹೊರ ರಾಜ್ಯಗಳಲ್ಲಿ ಕಾರಾಗೃಹಗಳಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ನೂತನ ವಿಧೇಯಕ ತರಲಾಗಿದೆ ಎಂದು ಆರಗ ಜ್ಞಾನೇಂದ್ರ ಸಮರ್ಥಿಸಿದರು.

`ಕಾರಾಗೃಹದ ಸಿಬ್ಬಂದಿ ಭ್ರಷ್ಟಾಚಾರ ಮಿತಿ ಮೀರಿದ್ದು, ಅದನ್ನು ತಪ್ಪಿಸಬೇಕೆಂಬ ಹಿರಿಯ ಸದಸ್ಯ ರಮೇಶ್ ಕುಮಾರ್ ಪ್ರಸ್ತಾಪಕ್ಕೆ ಪ್ರಕ್ರಿಯಿಸಿದ ಆರಗ ಜ್ಞಾನೇಂದ್ರ, ಜೆಪಿ ಚಳವಳಿ ಸಂದರ್ಭದಲ್ಲಿ ಕೆಲ ಹೋರಾಟಗಾರರನ್ನು ಬಳ್ಳಾರಿ ಜೈಲಿನಲ್ಲಿ ಇಟ್ಟಿದ್ದರು. ಕೋರ್ಟ್‍ನಿಂದ ಬಿಡುಗಡೆ ಆದೇಶ ಪಡೆದುಕೊಂಡಿದ್ದರೂ ಅವರ ಬಿಡುಗಡೆಗೆ 8 ಸಾವಿರ ರೂ.ಲಂಚ ಕೊಟ್ಟ ಪ್ರಸಂಗವನ್ನು ಉಲ್ಲೇಖಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಜೆಡಿಎಸ್‍ನ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ, ಕೋರ್ಟ್ ಆದೇಶವಿದ್ದರೆ ಯಾವುದೇ ವಿಳಂಬ ನೀತಿ ಅನುಸರಿಸದೆ ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಬಂಧಿತರನ್ನು ಕಾರಾಗೃಹದಿಂದ ಬಿಡುಗಡೆ ಕೂಡಲೇ ಆದೇಶ ಹೊರಡಿಸಿ ಎಂದು ಸಲಹೆ ನೀಡಿದರು. ಆ ಬಳಿಕ ಎರಡು ವಿಧೇಯಕಗಳನ್ನು ಪ್ರತ್ಯೇಕವಾಗಿ ಸ್ಪೀಕರ್ ಕಾಗೇರಿ ಅವರು ಮತಕ್ಕೆ ಹಾಕಿದ ಧ್ವನಿಮತ ಅಂಗೀಕಾರ ದೊರಕಿತು.

ಅರ್ಧಗಂಟೆಯೊಳಗೆ ಬಿಡುಗಡೆ ಮಾಡಲು ಆದೇಶ

`ಸದಾ ಕ್ರಿಮಿನಲ್ಸ್‍ಗಳೊಂದಿಗೆ ಇರುವ ಕಾರಾಗೃಹ ಸಿಬ್ಬಂದಿಗೂ ಅಪರಾಧಿಗಳ ಮನೋಭಾವವೂ ಇರುತ್ತದೆ. ಅದನ್ನು ಬದಲಾವಣೆ ಮಾಡಲು ಮತ್ತು ಸುಧಾರಣೆಗೆ ಸರಕಾರ ಕ್ರಮ ವಹಿಸುತ್ತಿದೆ. ಜೊತೆಗೆ ಕೋರ್ಟ್ ಬಿಡುಗಡೆ ಆದೇಶವಿದ್ದರೆ ಕೈದಿ ಅಥವಾ ವಿಚಾರಣಾಧೀನ ಕೈದಿಗಳನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ತತಕ್ಷಣವೇ ಬಿಡುಗಡೆಗೆ ಆದೇಶ ಹೊರಡಿಸಲಾಗುವುದು'

-ಆರಗ ಜ್ಞಾನೇಂದ್ರ ಗೃಹ ಸಚಿವ

ಒಳ್ಳೆಯ ಸ್ಕಾಚ್ ಅಲ್ಲಿ ಸಿಕ್ಕುತ್ತೆ

`ಕಾರಾಗೃಹ ಸಿಬ್ಬಂದಿ ವೇತನ ಬಹಳ ಕಡಿಮೆ. ಹೀಗಾಗಿ ಅವರಿಗೆ ಬೇರೆ ಆದಾಯ ಇರುವುದಿಲ್ಲ. ಆದುದರಿಂದ ಅವರು ಅಪರಾಧ ಕೃತ್ಯಗಳನ್ನು ಮಾಡಿ ಜೈಲಿಗೆ ಹೋದವರ ಬಳಿಯೇ ಕೈಯೊಡ್ಡುವ ಸ್ಥಿತಿ ಇದೆ. ಅದನ್ನು ಮೊದಲು ಬದಲಾವಣೆ ಮಾಡಬೇಕು. ಎಲ್ಲೂ ಸಿಗದ ಒಳ್ಳೆಯ ಸ್ಕಾಚ್(ವಿಸ್ಕಿ) ಜೈಲುಗಳಲ್ಲಿ ಸಿಗುತ್ತೆ ಎಂದು ನಮ್ಮ ಸ್ನೇಹಿತರು ಹೇಳುತ್ತಿದ್ದರು. ಡೊಳ್ಳು ಹೊಟ್ಟೆ ಇಟ್ಟುಕೊಂಡ ಸಿಬ್ಬಂದಿ ಸುಧಾರಣೆ ಮಾಡಬೇಕು. ಸಿಬ್ಬಂದಿ ವೇತನ, ಭತ್ತೆ, ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಕ್ರಮ ವಹಿಸಬೇಕು. ಅದು ಬಿಟ್ಟು ಈ ಬಂದೀಖಾನೆ ಅಭಿವೃದ್ಧಿ ಮಂಡಳಿ ಅಗತ್ಯವೇನು?'

-ಕೆ.ಆರ್.ರಮೇಶ್ ಕುಮಾರ್ ಹಿರಿಯ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News