ಅಂಧ ವಿದ್ಯಾರ್ಥಿಗಳಿಗೆ 15 ದಿನದಲ್ಲಿ ಪಠ್ಯಪುಸ್ತಕ ವಿತರಿಸಲು ಹೈಕೋರ್ಟ್ ಸೂಚನೆ

Update: 2021-09-17 17:50 GMT

ಬೆಂಗಳೂರು, ಸೆ.17: ಕರ್ನಾಟಕದ ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಲಿಪಿ ಪಠ್ಯ ಪುಸ್ತಕವನ್ನು 15 ದಿನಗಳಲ್ಲಿ ವಿತರಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. 

ಪ್ರಸಕ್ತ ಸಾಲಿನಿಂದ ಪಠ್ಯ ಪುಸ್ತಕ ವಿತರಿಸಲಾಗುವುದು ಎಂದು ಹಿಂದಿನ ವರ್ಷ ಸರಕಾರ ನೀಡಿದ್ದ ಭರವಸೆ ಗಮನಿಸಿದ ಪೀಠ, ಈ ಆದೇಶ ನೀಡಿದೆ.

ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ರಾಷ್ಟ್ರೀಯ ಅಂಧರ ಒಕ್ಕೂಟ (ಎನ್‌ಎಫ್‌ಬಿ), ‘ಅಂಧ ವಿದ್ಯಾರ್ಥಿಗಳಿಗೆ ಉಚಿತವಾಗಿ ಸರಕಾರ ಪಠ್ಯ ಪುಸ್ತಕ ವಿತರಿಸಬೇಕು. ಪುಸ್ತಕ ಮತ್ತು ಇತರ ಕಲಿಕಾ ಸಾಮಗ್ರಿಗಳು ಬ್ರೈಲ್ ಲಿಪಿಯಲ್ಲಿ ಇರಬೇಕು’ ಎಂದು ಮನವಿ ಮಾಡಿತ್ತು. 

ಈ ಸಂಬಂಧ 2016ರ ನ.29ರಂದು ಕೇಂದ್ರ ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ಒಕ್ಕೂಟ ಉಲ್ಲೇಖಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ‘ಪುಸ್ತಕ ವಿತರಣೆ ಮಾಡಿ ಅನುಸರಣಾ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸಬೇಕು’ ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಅ.7ಕ್ಕೆ ಮುಂದೂಡಿತು.

ಅಂಧ ಮಕ್ಕಳ ಅನುಕೂಲಕ್ಕಾಗಿ 107 ಪುಸ್ತಕಗಳನ್ನು ಈಗಾಗಲೇ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಸರಕಾರ ಇದೇ ವೇಳೆ ವಿವರ ಸಲ್ಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News