ಕಾಬೂಲ್ ಡ್ರೋನ್ ದಾಳಿಯಲ್ಲಿ 10 ನಾಗರಿಕರ ಮೃತ್ಯು; ಅಮೆರಿಕ ತಪ್ಪೊಪ್ಪಿಗೆ

Update: 2021-09-18 03:58 GMT

ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಯನ್ನು ವಾಪಾಸು ಪಡೆಯುವ ಪ್ರಕ್ರಿಯೆ ಸಂದರ್ಭದಲ್ಲಿ ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಗುರಿ ಮಾಡಿ ಕಾಬೂಲ್‌ನಲ್ಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಉಗ್ರರ ಬದಲಾಗಿ 10 ಮಂದಿ ನಾಗರಿಕರು ಮೃತಪಟ್ಟಿರುವುದು "ದೊಡ್ಡ ದುರಂತ" ಎಂದು ಅಮೆರಿಕ ತಪ್ಪೊಪ್ಪಿಕೊಂಡಿದೆ.

ಕಾಬೂಲ್ ವಿಮಾನ ನಿಲ್ದಾಣದ ಮೇಲಿನ ದಾಳಿ ಹಿನ್ನೆಲೆಯಲ್ಲಿ ಶಂಕಿತ ಐಎಸ್ ಕಾರ್ಯಕರ್ತರನ್ನು ಗುರಿ ಮಾಡಿ ಅಮೆರಿಕ ಈ ಡ್ರೋನ್ ದಾಳಿ ನಡೆಸಿತ್ತು ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್‌ನ ಕಮಾಂಡರ್ ಜನರಲ್ ಕೆನೆತ್ ಮೆಕೆಂಜಿ ಹೇಳಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇದೊಂದು ದುರಂತ ಹಾಗೂ ಪ್ರಮಾದ" ಎಂದು ಬಣ್ಣಿಸಿದ್ದಾರೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡಾ ಆಸ್ಟಿನ್ ಅವರು, ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಲ್ಲಿ ಕ್ಷಮೆ ಯಾಚಿಸಿದ್ದಾರೆ.
"ದಾಳಿಯಲ್ಲಿ ಮೃತಪಟ್ಟ ನಾಗರಿಕರ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತಿದ್ದೇನೆ" ಎಂದು ಆಸ್ಟಿನ್ ಹೇಳಿದ್ದಾರೆ. "ನಾವು ಕ್ಷಮೆ ಯಾಚಿಸುತ್ತೇವೆ. ಈ ಭಯಾನಕ ಪ್ರಮಾದದಿಂದ ನಾವು ಪಾಠ ಕಲಿತಿದ್ದೇವೆ" ಎಂದು ಬಣ್ಣಿಸಿದ್ದಾರೆ.

ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹೇಗೆ ಪರಿಹಾರ ಪಾವತಿಸಬಹುದು ಎನ್ನುವುದನ್ನು ಸರ್ಕಾರ ಅಧ್ಯಯನ ಮಾಡುತ್ತಿದೆ ಎಂದು ಮೆಕೆಂಜಿ ಸ್ಪಷ್ಟಪಡಿಸಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದ್ದರು ಎನ್ನಲಾದ ಇಸ್ಲಾಮಿಕ್ ಸ್ಟೇಟ್ ಉಗ್ರರು ಕಾರ್ಯಾಚರಣೆ ನಡೆಸಿದ ಸ್ಥಳ ಎಂದು ಅಮೆರಿಕದ ಗುಪ್ತಚರ ವಿಭಾಗದವರು ಗುರುತಿಸಿದ ಸ್ಥಳದಲ್ಲಿದ್ದ ಬಿಳಿ ಬಣ್ಣದ ಟೊಯೋಟಾ ವಾಹನದ ಮೇಲೆ ಆಗಸ್ಟ್ 29ರಂದು ಅಮೆರಿಕ ಸೇನೆ ಎಂಟು ಗಂಟೆ ಕಾಲ ಡ್ರೋನ್ ದಾಳಿ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News