ಕಾಂಗ್ರೆಸ್ ಪಂಜಾಬ್ ಘಟಕದಲ್ಲಿ ಹೊತ್ತಿದ ಹೊಸ ಕಿಡಿ, ಇಂದು ಶಾಸಕಾಂಗ ಸಭೆ

Update: 2021-09-18 06:26 GMT

ಹೊಸದಿಲ್ಲಿ: ಕಾಂಗ್ರೆಸ್ ನ ಪಂಜಾಬ್ ಘಟಕದಲ್ಲಿ ಹೊಸ ಕಿಡಿ ಹೊತ್ತಿಕೊಂಡಿದೆ. 'ಹೆಚ್ಚಿನ ಸಂಖ್ಯೆಯ ಶಾಸಕರ ಪ್ರಾತಿನಿಧ್ಯ' ವನ್ನು ಉಲ್ಲೇಖಿಸಿ ತಡರಾತ್ರಿ ಟ್ವೀಟ್ ಮಾಡಿದ ಕಾಂಗ್ರೆಸ್, ಶನಿವಾರ ತನ್ನ ಪಂಜಾಬ್ ಶಾಸಕರ ಪ್ರಮುಖ ಸಭೆಗೆ ಕರೆ ನೀಡಿದೆ.

ಬಂಡಾಯ ನಾಯಕರ ಗುರಿಯಾಗಿರುವ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಈ ಸಭೆಯು ಸಮಸ್ಯೆ ತಂದೊಡ್ಡಬಹುದು. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಮಾತು ಕೇಳಿ ಬಂದಿದೆ.

" ತಕ್ಷಣವೇ ಪಂಜಾಬ್ ನ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ ಪಿ) ಸಭೆಯನ್ನು ಕರೆಯುವಂತೆ ಹೆಚ್ಚಿನ ಸಂಖ್ಯೆಯ ಶಾಸಕರು ಎಐಸಿಸಿಯನ್ನು ವಿನಂತಿಸಿದ್ದಾರೆ. ಅದರ ಪ್ರಕಾರ ಸೆಪ್ಟೆಂಬರ್ 18, ಸಂಜೆ 5 ಗಂಟೆಗೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶಾಸಕಾಂಗ ಪಕ್ಷ ಸಭೆ ಕರೆಯಲಾಗಿದೆ.

"ಈ ಸಭೆ ಆಯೋಜಿಸುವಂತೆ  ಪಿಪಿಸಿಸಿಗೆ ಎಐಸಿಸಿ ನಿರ್ದೇಶನ ನೀಡಿದೆ. ಪಂಜಾಬಿನ ಎಲ್ಲ ಕಾಂಗ್ರೆಸ್ ಶಾಸಕರು ದಯಮಾಡಿ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ" ಎಂದು ಕಾಂಗ್ರೆಸ್ ನ ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಶುಕ್ರವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.

ರಾವತ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ತಮ್ಮ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

"ಎಐಸಿಸಿ ನಿರ್ದೇಶನದ ಪ್ರಕಾರ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಚಂಡೀಗಡದಲ್ಲಿರುವ ಪಂಜಾಬ್ ಕಾಂಗ್ರೆಸ್ ಕಚೇರಿಯಲ್ಲಿ 18 ಸೆಪ್ಟೆಂಬರ್ 2021 (ಶನಿವಾರ) ಸಂಜೆ 5 ಗಂಟೆಗೆಕರೆಯಲಾಗಿದೆ" ಎಂದು ನವಜೋತ್ ಸಿಂಗ್ ಸಿಧು  ಹೇಳಿದರು.

ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಮೊಹಾಲಿಯಲ್ಲಿರುವ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿಗಳು ತಮ್ಮ ನಿಷ್ಠಾವಂತ ಶಾಸಕರನ್ನು ಭೇಟಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News