ಛತ್ತೀಸ್‌ಗಢ ಮಾಜಿ ಸಚಿವ, ಬಿಜೆಪಿ ಮುಖಂಡ ಆತ್ಮಹತ್ಯೆ

Update: 2021-09-20 03:26 GMT

ರಾಜನಂದಗಾಂವ್ : ಛತ್ತೀಸ್‌ಗಢದ ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ಮುಖಂಡ ರಾಜೀಂದರ್ ಪಾಲ್ ಸಿಂಗ್ ಭಾಟಿಯಾ ಅವರ ಮೃತದೇಹ ಅವರ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ರವಿವಾರ ರಾತ್ರಿ ಚುರಿಯಾ ಪಟ್ಟಣದ ನಿವಾಸದಲ್ಲಿ ಭಾಟಿಯಾ (72) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ವಿಷಯ ತಿಳಿದ ತಕ್ಷಣ ಧಾವಿಸಿದ ಪೊಲೀಸ್ ತಂಡ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಟಿಪ್ಪಣಿ ಲಭ್ಯವಾಗಿದೆಯೇ ಎನ್ನುವುದನ್ನು ಪೊಲೀಸರು ಇದುವರೆಗೆ ದೃಢಪಡಿಸಿಲ್ಲ.

ಬಿಜೆಪಿ ಮುಖಂಡರ ಪ್ರಕಾರ, ಭಾಟಿಯಾ ಅವರಿಗೆ ಕಳೆದ ಮಾರ್ಚ್‌ನಲ್ಲಿ ಕೋವಿಡ್-19 ಸೋಂಕು ತಗುಲಿತ್ತು. ಇದರಿಂದ ಚೇತರಿಸಿಕೊಂಡ ಬಳಿಕವೂ ಅಸ್ವಸ್ಥತೆ ಕಾಡುತ್ತಿತ್ತು. 

ಜಿಲ್ಲೆಯ ಖುಜ್ಜಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದ ಭಾಟಿಯಾ, ರಮಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2013ರಲ್ಲಿ ಇವರಿಗೆ ಪಕ್ಷ ಟಿಕೆಟ್ ನಿರಾಕರಿಸಿದ ಸಂದರ್ಭದಲ್ಲಿ ಇವರು ಬಂಡಾಯದ ಬಾವುಟ ಹಾರಿಸಿದ್ದರು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.
ಆದರೆ ಮತ್ತೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಇವರ ಪತ್ನಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, ಏಕೈಕ ಪುತ್ರ ಜಗಜೀತ್ ಸಿಂಗ್ ಭಾಟಿಯಾ ರಾಯಪುರದ ಖಾಸಗಿ ಆಸ್ಪತ್ರೆಯೊಂದರ ಆಡಳಿತ ಮಂಡಳಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News