ಗಣೇಶ ವಿಸರ್ಜನೆ ವೇಳೆ ಸಮುದ್ರದಲ್ಲಿ ಮುಳುಗಿದ ಐವರು ಮಕ್ಕಳು; ಇಬ್ಬರ ರಕ್ಷಣೆ

Update: 2021-09-20 04:21 GMT

ಮುಂಬೈ : ಗಣೇಶ ಮೂರ್ತಿ ವಿಸರ್ಜನೆ ವೇಳೆ ಐವರು ಮಕ್ಕಳು ಸಮುದ್ರದಲ್ಲಿ ಮುಳುಗಿದ ಘಟನೆ ವೆರ್ಸೋವಾ ಜೆಟ್ಟಿಯಲ್ಲಿ ರವಿವಾರ ರಾತ್ರಿ ನಡೆದಿದೆ. ಈ ಪೈಕಿ ಇಬ್ಬರನ್ನು ರಕ್ಷಿಸಲಾಗಿದ್ದು, ಮೂವರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಪ್ರಕಟಿಸಿದೆ.

ಇಬ್ಬರು ಮಕ್ಕಳನ್ನು ಸ್ಥಳೀಯರು ರಕ್ಷಿಸಿ ಕೂಪರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಬೈ ಅಗ್ನಿಶಾಮಕ ದಳದ ಸಿಬ್ಬಂದಿ ಇತರ ಮೂವರು ಮಕ್ಕಳ ಪತ್ತೆಯಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

"ವೆರ್ಸೋವಾ ಜೆಟ್ಟಿಯಲ್ಲಿ ನಡೆದ ದುರದೃಷ್ಟಕರ ಘಟನೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗಾಗಿ ಸಮುದ್ರಕ್ಕೆ ಜಿಗಿದ ಐದು ಮಕ್ಕಳು ಮುಳುಗಿದ್ದಾರೆ. ಇಬ್ಬರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳಿದ ಮೂವರ ಪತ್ತೆಯಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ" ಎಂದು ಬಿಎಂಸಿ ಟ್ವೀಟ್ ಮಾಡಿದೆ.

"ಇದು ಗಣೇಶ ಮೂರ್ತಿ ವಿಸರ್ಜನೆಗೆ ನಿಗದಿಪಡಿಸಿದ ಸ್ಥಳ ಆಗಿರಲಿಲ್ಲ. ಜನರು ಇಲ್ಲಿಗೆ ಬರದಂತೆ ನಿರ್ಬಂಧಿಸಿದ್ದೆವು. ಆದಾಗ್ಯೂ ಕೆಲ ಕಿಡಿಗೇಡಿತನದಿಂದ ಗಣಪತಿ ವಿಸರ್ಜನೆಗಾಗಿ ಇಲ್ಲಿಗೆ ಅಕ್ರಮವಾಗಿ ಪ್ರವೇಶಿಸಿದ್ದರು" ಎಂದು ಪೊಲೀಸ್ ಅಧಿಕಾರಿ ಮನೋಜ್ ವಾಮನ ಪೋಹನೇಕರ್ ಹೇಳಿದ್ದಾರೆ.

ಮಕ್ಕಳ ಶೋಧಕಾರ್ಯಕ್ಕೆ ನೌಕಾಪಡೆಯ ಮುಳುಗು ತಜ್ಞರು ಮತ್ತು ಪೊಲೀಸ್ ನಾವೆಯನ್ನು ಕೋರಲಾಗಿದೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News