ಥಲಸೇಮಿಯಾ ರೋಗಿಗಳಿಗೆ ಕಿಲೇಷನ್ ಔಷಧ ಪೂರೈಕೆ ಕೋರಿ ಹೈಕೋರ್ಟ್‍ಗೆ ಅರ್ಜಿ

Update: 2021-09-20 18:45 GMT

ಬೆಂಗಳೂರು, ಸೆ.20: ಥಲಸೇಮಿಯಾ ರೋಗಿಗಳಿಗೆ ಕಿಲೇಷನ್ ಔಷಧ, ರಕ್ತ ಪೂರೈಕೆ ಮತ್ತು ಕೋವಿಡ್ ಲಸಿಕೆಯನ್ನು ತುರ್ತಾಗಿ ಪೂರೈಕೆ ಮಾಡಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಲು ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.  

ಈ ಕುರಿತು ಸಿಕಲ್ ಸೆಲ್ ಸೊಸೈಟಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದೆ. ಥಲಸೇಮಿಯಾ ರಕ್ತಕ್ಕೆ ಸಂಬಂಧಿಸಿದ ರೋಗವಾಗಿದೆ. ಅಂಗವೈಕಲ್ಯ ಕಾಯಿದೆ ಹಕ್ಕು 2016ರ ವ್ಯಾಪ್ತಿಯಲ್ಲಿ ರೋಗಿಗೆ ಸೌಲಭ್ಯ ಕಲ್ಪಿಸುವುದು ರಾಜ್ಯ ಸರಕಾರದ ಕರ್ತವ್ಯವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಥಲಸೇಮಿಯಾ ಚಿಕಿತ್ಸೆಗೆ ಬಳಸಲಾಗುತ್ತಿದ್ದ ಕಿಲೇಷನ್ ಔಷಧವನ್ನು ಸರಕಾರ ಪೂರೈಸುತ್ತಿತ್ತು. ಆದರೆ, ಇದ್ದಕ್ಕಿದ್ದಂತೆ ಔಷಧ ಪೂರೈಕೆ ಬಂದ್ ಮಾಡಿರುವ ಸರಕಾರವು ಈ ಸಂಬಂಧ ಯಾವುದೇ ಕ್ರಮಕೈಗೊಂಡಿಲ್ಲ. ಔಷಧ ಪೂರೈಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ರಾಜ್ಯ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಕರ್ನಾಟಕದಲ್ಲಿ 17 ಸಾವಿರ ಥಲಸೇಮಿಯಾ ರೋಗಿಗಳಿದ್ದು, ಜೀವ ಉಳಿಸುವ ಈ ಔಷಧ ಪೂರೈಕೆಯಾಗದಿರುವುದರಿಂದ ಅವರ ಬದುಕು ಅಪಾಯದಲ್ಲಿದೆ. ರಾಜ್ಯ ಸರಕಾರ ಕ್ರಮಕೈಗೊಳ್ಳದಿರುವುದರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಕಿಲೇಷನ್ ಔಷಧ ದೊರೆಯುತ್ತಿದ್ದು, ಪ್ರತಿ ದಿನ ರೋಗಿಯೊಬ್ಬರು 1 ಸಾವಿರದಿಂದ 1,500 ರೂಪಾಯಿ ವೆಚ್ಚ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಥಲಸೇಮಿಯಾ ರೋಗಿಗಳ ದೃಷ್ಟಿಯಿಂದ ಕಿಲೇಷನ್ ಔಷಧವನ್ನು ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಅನಿಯಂತ್ರಿತವಾಗಿ ಉಚಿತವಾಗಿ ಧಕ್ಕುವಂತೆ ಆದೇಶ ಮಾಡಬೇಕು. ಥಲಸೇಮಿಯಾ ರೋಗಿಗಳಿಗೆ ಅಗತ್ಯವಾದಷ್ಟು, ಸುರಕ್ಷಿತ, ಉಚಿತ ಮತ್ತು ಸೂಕ್ತ ಸಂದರ್ಭದಲ್ಲಿ ರಕ್ತ ಪೂರೈಕೆಯಾಗುವಂತೆ ಮಾಡಬೇಕು. ಈ ಸಂಬಂಧ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹೇಳಲಾಗಿದೆ.

ಅಂಗವಿಕಲರ ಕಲ್ಯಾಣ ಅಧಿಕಾರಿ ಉಸ್ತುವಾರಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಥಲಸೇಮಿಯಾ ರೋಗಿಗಳಿಗೆ ಕಿಲೇಷನ್ ಔಷಧ ಪೂರೈಸಲು ಆದೇಶಿಸಬೇಕು. ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ತರಬೇತಿ ಹೊಂದಿದ ಶುಷ್ರೂಷಕಿಯರು ಮತ್ತು ವೈದ್ಯರು ಥಲಸೇಮಿಯಾ ರೋಗಕ್ಕೆ ಚಿಕಿತ್ಸೆ ನೀಡಲು ಇರುವಂತೆ ಮಾಡಬೇಕು. ಇಲ್ಲವಾದಲ್ಲಿ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಪ್ರವೇಶಿಸುವ ಅನಿವಾರ್ಯತೆ ರೋಗಿಗಳಿಗೆ ಸೃಷ್ಟಿಯಾಗಲಿದ್ದು, ಇದು ಮತ್ತಷ್ಟು ಸಮಸ್ಯೆಗೆ ಕಾರಣವಾಗಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News