ಹನೂರು: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 3 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢ

Update: 2021-09-21 04:29 GMT

ಚಾಮರಾಜನಗರ, ಸೆ.21: ಜಿಲ್ಲೆಯ ಹನೂರು ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೂವರು ವಿದ್ಯಾರ್ಥಿಗಳಲ್ಲಿ ಕೋವಿಡ್-19 ಪ್ರಕರಣ ದೃಢಪಟ್ಟಿದೆ.

ಹನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಓರ್ವ ಪಿಯುಸಿ ವಿದ್ಯಾರ್ಥಿ ಹಾಗೂ 9 ಮತ್ತು 10ನೇ ತರಗತಿಯ ತಲಾ ಓರ್ವ ವಿದ್ಯಾರ್ಥಿ ಕೋವಿಡ್ ಗೆ ಪಾಸಿಟಿವ್ ಆಗಿದ್ದಾರೆ.

ಈ ವಸತಿ ವಸತಿ ಶಾಲೆ ಪ್ರಾರಂಭವಾಗುವ ಮುನ್ನ ಎಲ್ಲಾ ವಿದ್ಯಾರ್ಥಿಗಳ ಕೋವಿಡ್ ನೆಗೆಟಿವ್ ರಿಪೋರ್ಟ್ ಪಡೆದೇ ದಾಖಲು ಮಾಡಿಕೊಳ್ಳಲಾಗಿತ್ತು . ಆದರೆ ಕಳೆದ ಒಂದು ವಾರದ ಹಿಂದೆ ಕೆಲ ವಿದ್ಯಾರ್ಥಿಗಳಲ್ಲಿ ನೆಗಡಿ, ಕೆಮ್ಮು, ಶೀತಜ್ವರ ಕಂಡುಬಂದ ಹಿನ್ನೆಲೆ ಹನೂರು ಪಟ್ಟಣದ ಕೋವಿಡ್ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದ ಸ್ವಾಬ್ ಮಾದರಿಯಲ್ಲಿ 3 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢಪಟ್ಟಿದೆ. ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಇಲಾಖಾ ಹಿರಿಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಶಾಲೆಗೆ ತೆರಳಿದ ಆರೋಗ್ಯ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿ ತಂಡ 13 ವಿದ್ಯಾರ್ಥಿಗಳ ಪರೀಕ್ಷೆ ನಡೆಸಿದ್ದು ಎಲ್ಲಾ 13 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದೆ. 99 ವಿದ್ಯಾರ್ಥಿಗಳಿಂದ ಆಲ್ಟಿಪಿಸಿಆರ್ ಟೆಸ್ಟ್ ಗೆ ಸ್ವಾಬ್ ಪಡೆದಿದ್ದು ಪರೀಕ್ಷೆಗೆ ರವಾನಿಸಲಾಗಿದೆ. ಫಲಿತಾಂಶ ಬರುವವರೆಗೂ 99 ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸುವಂತೆ ಆರೋಗ್ಯ ಇಲಾಖಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಟಿ.ಆರ್. ಈ ಕುರಿತು ಪ್ರತಿಕ್ರಿಯೆ ನೀಡಿ , 3 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ನಿಜ . ಈಗಾಗಲೇ ಶಾಲೆಯ ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ . ಅಲ್ಲದೆ ಪ್ರತಿ 2 ದಿನಕ್ಕೊಮ್ಮೆ ಎಲ್ಲಾ ಶಾಲೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದ್ದು ಶಾಲೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News