ತಮಿಳುನಾಡು:ಮಧ್ಯಾಹ್ನದ ಊಟ ಸೇವಿಸಿ 17 ಅಂಗನವಾಡಿ ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Update: 2021-09-21 07:39 GMT
ಸಾಂದರ್ಭಿಕ ಚಿತ್ರ

ಚೆನ್ನೈ: ಮಧ್ಯಾಹ್ನದ ಊಟ ಸೇವಿಸಿ ಅಸ್ವಸ್ಥರಾಗಿದ್ದ ಹದಿನೇಳು ಅಂಗನವಾಡಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಬೂತಮಕಟ್ಟಿಕಂಬಳಿಮೇಡು ಎಂಬಲ್ಲಿ ಸೋಮವಾರ ನಡೆದಿದೆ. ಊಟದ ತಟ್ಟೆಯಲ್ಲಿ ಸತ್ತ ಹಲ್ಲಿ ಕಂಡುಬಂದಿದೆ ಎಂದು ವರದಿಯಾಗಿದೆ.

ಅಂಗನವಾಡಿ ಕಾರ್ಯಕರ್ತೆ ಜಯಚಿತ್ರಾ ಹಾಗೂ  ಸಹಾಯಕಿ ಅಮ್ಸವಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಬಡಿಸಿದ್ದರು.  ಊಟ ಮಾಡಿದ ತಕ್ಷಣವೇ  ಮೂವರು ಮಕ್ಕಳು ವಾಕರಿಕೆ ಬರುತ್ತದೆ ಎಂದು ಹೇಳಿದ್ದವು. ನಂತರ  ವಾಂತಿ ಮಾಡಲು  ಆರಂಭಿಸಿದವು. ಅವರಲ್ಲಿ ಕೆಲವರು ಅಸ್ವಸ್ಥರಾದರು.  ಎಲ್ಲಾ 17 ಮಕ್ಕಳನ್ನು ಆ್ಯಂಬುಲೆನ್ಸ್‌ನಲ್ಲಿ ಕಡಲೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ.

ಕಡಲೂರು ಜಿಲ್ಲಾಧಿಕಾರಿ ಕೆ. ಬಾಲಸುಬ್ರಮಣ್ಯಂ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

"ಮಕ್ಕಳಿಗೆ ನೀಡಲಾಗಿದ್ದಒಂದು ತಟ್ಟೆಯಲ್ಲಿ ಹಲ್ಲಿ ಕಂಡುಬಂದಿದೆ ಎಂದು ನಮಗೆ ವರದಿಗಳು ಬಂದಿವೆ. ಆಹಾರದ ಮಾದರಿಗಳನ್ನು ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ಎಲ್ಲ 17 ಮಕ್ಕಳನ್ನು ಇಂದು (ಮಂಗಳವಾರ) ಡಿಸ್ಚಾರ್ಜ್ ಮಾಡಲಾಗಿದೆ. ಈ ಘಟನೆಯ ಬಗ್ಗೆ ತನಿಖೆಗೆ ಆಹಾರ ಭದ್ರತಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ ಹಾಗೂ  ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಆಹಾರದ ಗುಣಮಟ್ಟವನ್ನು ಪರಿಶೀಲಿಸುವಂತೆ ಹೇಳಿದ್ದಾರೆ. ಕೆಲಸಗಾರರು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು’’ ಎಂದು ಕಡಲೂರು ಜಿಲ್ಲಾ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋವಿಡ್ -19 ರ ಕಾರಣದಿಂದ ರಾಜ್ಯದಾದ್ಯಂತ ಮುಚ್ಚಿದ್ದ ಅಂಗನವಾಡಿ ಕೇಂದ್ರಗಳ ಬಾಗಿಲನ್ನು ಸೆಪ್ಟೆಂಬರ್ 1 ರಂದು ಮತ್ತೆ ತೆರೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News