ಸ್ಯಾಟಲೈಟ್ ಫೋನ್ ಬಳಕೆ ಬಗ್ಗೆ ಸರಕಾರದ ನಿಗಾ: ಸಚಿವ ಆರಗ ಜ್ಞಾನೇಂದ್ರ

Update: 2021-09-21 13:05 GMT

ಬೆಂಗಳೂರು, ಸೆ. 21: `ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ `ಸ್ಯಾಟಲೈಟ್ ನ್' ಬಳಕೆಯ ಸುದ್ದಿಗಳು ಆಗಾಗ ಮಾಧ್ಯಮಗಳಲ್ಲಿ ಬರುತ್ತಿದ್ದು ಈ ಸಂಶಯದ ಬಗ್ಗೆ ಸರಕಾರ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯ ಯು.ಟಿ ಖಾದರ್ ಆಗ್ರಹಿಸಿದ ಪ್ರಸಂಗ ನಡೆಯಿತು.

ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, `ಕರಾವಳಿಯಲ್ಲಿ ಪದೇ ಪದೇ ಸ್ಯಾಟಲೈಟ್ ಫೋನ್ ಬಳಕೆ ಮಾಡಲಾಗುತ್ತಿದೆ ಎಂದು ಸುದ್ದಿಗಳು ಬಿತ್ತರವಾಗುತ್ತಿದ್ದು, ಆ ಭಾಗದ ಜನತೆ ಗೊಂದಲದಲ್ಲಿದ್ದಾರೆ. ಈ ಕುರಿತು ತನಿಖೆ ನಡೆಸಿ ಸರಕಾರ ಅಧಿಕೃತ ಹೇಳಿಕೆಯನ್ನು ನೀಡಬೇಕು' ಎಂದು ಒತ್ತಾಯಿಸಿದರು.

`ವರ್ಷದ ಹಿಂದೆಯೂ ಸ್ಯಾಟ್‍ಲೈಟ್ ಫೋನ್ ಸುದ್ದಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಯುವಕನೊಬ್ಬನ ಮೇಲೆ ವಿನಾಕಾರಣ ಆರೋಪ ಮಾಡಲಾಗಿತ್ತು. ಆದರೆ, ಪರಿಶೀಲನೆ ನಡೆಸಿದರೆ ಆ ಆರೋಪ ಸುಳ್ಳಾಗಿತ್ತು' ಎಂದು ಖಾದರ್ ಗಮನ ಸೆಳೆದರು.

220 ಕರೆಗಳು: ಸದಸ್ಯ ಖಾದರ್ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, `ರಾಜ್ಯದ ಕರಾವಳಿ ಭಾಗದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಬಗ್ಗೆ ಮಾಧ್ಯಮಗಳ ವರದಿ ಗಮನಿಸಿದ್ದೇನೆ. ದೇಶದ ಸುರಕ್ಷತೆಯ ದೃಷ್ಟಿಯಿಂದ ಸ್ಯಾಟಲೈಟ್ ಪೋನ್ ಬಳಕೆ ದೇಶದಲ್ಲಿ ನಿಷೇಧಿಸಲಾಗಿದೆ. ಆದರೂ ಅಲ್ಲಲ್ಲಿ ಬಳಕೆ ಆಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ' ಎಂದು ಸ್ಪಷ್ಟಪಡಿಸಿದರು.

`2011ರ ಮುಂಬೈ ದಾಳಿಯ ನಂತರ ಸ್ಯಾಟಲೈಪ್ ಫೋನ್ ಬಳಕೆ ಬಗ್ಗೆ ನಿಗಾ ಇರಿಸಿದ್ದು, ರಾಜ್ಯದಲ್ಲಿ ಕಳೆದ  2020ರಲ್ಲಿ 256 ಮತ್ತು 2021ರಲ್ಲಿ 220 ಕರೆಗಳಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡುವುದು ಪತ್ತೆ ಮಾಡಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಜೊತೆ ಸಂಪರ್ಕದಲ್ಲಿದ್ದು, ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ದೇಶದ ಭದ್ರತೆ ವಿಷಯವೂ ಇದಾಗಿದ್ದು ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ, ಆತಂಕಪಡುವ ಅಗತ್ಯವಿಲ್ಲ. ಮೂಲ ಪತ್ತೆಹಚ್ಚುವ ಕೆಲಸ ಮಾಡಲಾಗುವುದು' ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News