ಅಕ್ಟೋಬರ್ 2ರೊಳಗೆ `ನಾಡಗೀತೆ' ಅವಧಿ-ಧಾಟಿ ನಿರ್ಧಾರ: ಸಚಿವ ವಿ.ಸುನೀಲ್ ಕುಮಾರ್

Update: 2021-09-21 13:29 GMT
ಸಚಿವ ವಿ.ಸುನೀಲ್ ಕುಮಾರ್

ಬೆಂಗಳೂರು, ಸೆ. 21: `ಅಕ್ಟೋಬರ್ 2ರ ಗಾಂಧಿ ಜಯಂತಿಯೊಳಗೆ `ನಾಡಗೀತೆ'ಯ ಅವಧಿ ಹಾಗೂ ರಾಗ ಸಂಯೋಜನೆ ಪರಿಷ್ಕರಣೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳ್ಳಲಾಗುವುದು' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯ ಎಂ.ಪಿ.ಕುಮಾರಸ್ವಾಮಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, `ನಾಡಗೀತೆ ಅವಧಿ ಮತ್ತು ರಾಗ ಸಂಯೋಜನೆ ಬಗ್ಗೆ ಈಗಾಗಲೇ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಮೈಸೂರಿನ ಲೀಲಾವತಿ ಮತ್ತು ಡಾ.ದೊಡ್ಡರಂಗೇಗೌಡರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. 

ಅವರು ನಾಡಗೀತೆಯ ಕಾಲಮಿತಿ ಹಾಗೂ ರಾಗ ಸಂಯೋಜನೆ ಪರಿಷ್ಕರಣೆ ಬಗ್ಗೆ ವರದಿ ನೀಡಲಿದ್ದು, ಇನ್ನು ಹದಿನೈದು ದಿನಗಳಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲು ಸೂಚನೆ ನೀಡಿದ್ದೇವೆ. ಅವರು ನೀಡಿದ ವರದಿ ಆಧಾರದಲ್ಲಿ ಅಕ್ಟೋಬರ್ 2ರ ಗಾಂಧಿ ಜಯಂತಿಯ ಒಳಗೆ ನಾಡಗೀತೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ' ಎಂದು ಸ್ಪಷ್ಟಪಡಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಶಾಸಕ ಎಂ.ಪಿ.ಕುಮಾರಸ್ವಾಮಿ, ನಮ್ಮ ನಾಡಗೀತೆ ನಮ್ಮ ಹೆಮ್ಮೆ. ಆದರೆ, ಬಹಳ ದಿನಗಳಿಂದ ನಾಡಗೀತೆ ಕಾಲಾವಧಿ ಮತ್ತು ರಾಗದ ಬಗ್ಗೆ ಚರ್ಚೆಯಾಗುತ್ತಿದೆ. ಈ ಹಿಂದೆಯೂ ಸಮಿತಿ ರಚನೆ ಮಾಡಲಾಗಿದ್ದು, ಈ ಕುರಿತು ಅಂತಿಮ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ ಸರಕಾರ ನಾಡಗೀತೆ ಕುರಿತು ಒಂದು ಸ್ಪಷ್ಟ ತೀರ್ಮಾನ ಪ್ರಕಟಿಸಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News