ಕೊಪ್ಪಳ: ದಲಿತ ಬಾಲಕ ದೇವಾಲಯ ಪ್ರವೇಶಿಸಿದ್ದಕ್ಕೆ 25 ಸಾವಿರ ರೂ. ದಂಡ

Update: 2021-09-21 14:24 GMT
ಸಾಂದರ್ಭಿಕ ಚಿತ್ರ

ಕೊಪ್ಪಳ: ದಲಿತ ಸಮುದಾಯದ ಬಾಲಕ ದೇವಾಲಯ ಪ್ರವೇಶಿಸಿದ್ದಕ್ಕೆ 25 ಸಾವಿರ ರೂ. ದಂಡ ವಿಧಿಸಿರುವ ಘಟನೆ ಕೊಪ್ಪಳದಲ್ಲಿ ವರದಿಯಾಗಿದೆ.

ದಲಿತ ಸಮುದಾಯದ ಮಗುವೊಂದು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು ದಂಡ ವಿಧಿಸಿ ದೇವಸ್ಥಾನ ಶುದ್ದೀಕರಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಊರಿನಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ ಎಂದು ದಲಿತ ಪರ ಸಂಘಟನೆಗಳು ಆರೋಪಿಸಿದೆ.

ಸೆಪ್ಟಂಬರ್ 4 ರಂದು ಈ ಘಟನೆ ನಡೆದಿದ್ದು ಚನ್ನದಾಸರ ಸಮುದಾಯದ ಮಗುವೊಂದು ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಹೋಗಿತ್ತು ಎನ್ನಲಾಗಿದೆ. ಅಂದು ಮಗುವಿನ ಜನ್ಮದಿನದ ಹಿನ್ನೆಲೆ ಮಗು ದೇವಸ್ಥಾನಕ್ಕೆ ಹೋಗಿತ್ತು ಎನ್ನಲಾಗಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ದಂಡ ವಿಧಿಸಿದವರಿಗೆ ಎಚ್ಚರಿಕೆ ನೀಡಿ, ಗ್ರಾಮಸ್ಥರಿಗೆ ತಿಳಿವಳಿಕೆ ಹೇಳಿದ್ದಾರೆ. ಆದರೆ ಘಟನೆ ಬಳಿಕ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಕರಣವನ್ನು ದಾಖಲಿಸಿಕೊಳ್ಳದೇ ಸುಮ್ಮನಿರುವುದು ಸರಿಯಲ್ಲ ಎಂದು ದಲಿತ ಪರ ಸಂಘಟನೆಗಳು ಒತ್ತಾಯಿಸಿದ್ದಾರೆ.

ಏನೂ ಅರಿಯದ ಎರಡು ವರ್ಷದ ಮಗುವೊಂದು ಅಚಾನಕ್ ಆಗಿ ದೇವಾಲಯ ಪ್ರವೇಶ ಮಾಡಿದ್ದೇ ತಪ್ಪಾಯ್ತು. ಇದಕ್ಕಾಗಿ ಮಗುವಿನ ಹೆತ್ತವರಿಗೆ ದಂಡ ಹಾಗೂ ದೇವಸ್ಥಾನದಲ್ಲಿ ಕೈಗೊಳ್ಳಬೇಕಿರುವ ಶುದ್ಧಿಕಾರ್ಯಗಳಿಗೆ ತಗಲುವ ವೆಚ್ಚ ನೀಡುವಂತೆ ಗ್ರಾಮದ ಮೇಲ್ಬಾತಿಯ ಮುಖಂಡರು ಷರತ್ತು ವಿಧಿಸಿ ಅಮಾನವೀಯತೆ ಮೆರೆದಿದ್ದಾರೆ.

ಬಿಜೆಪಿ ತನ್ನ ಆಡಳಿತದಲ್ಲಿ ದಲಿತ ವಿರೋಧಿ ವಾತಾವರಣ ನಿರ್ಮಿಸುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ. ಕೊಪ್ಪಳ ಜಿಲ್ಲೆ ಮಿಯಾಪುರದಲ್ಲಿ ದಲಿತರ ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಹೆತ್ತವರಿಗೆ ದಂಡ ವಿಧಿಸಿರುವ ಅಮಾನವೀಯ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಟ್ವಿಟ್ ಮಾಡಿದೆ.

'ದಲಿತರಿಗೆ ಮೂತ್ರ ಕುಡಿಸುವುದರಿಂದ ಹಿಡಿದು ಬಹಿಷ್ಕಾರ, ಹಲ್ಲೆಯ ಪ್ರಕರಣಗಳು ಹೆಚ್ಚುತ್ತಿವೆ. ಮನುವಾದಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ದಲಿತರಿಗೆ ನೆಮ್ಮದಿಯ ಬದುಕಿಲ್ಲದಂತಾಗಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಕಟ್ಟಲು ಹೊರಟ ಹಿಂದೂರಾಷ್ಟ್ರದ ಅಡಿಗಲ್ಲು ಇದೇನಾ!?'' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ದಲಿತವಿರೋಧಿಬಿಜೆಪಿ ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, 'ಮನುಸ್ಮೃತಿಯನ್ನು ನಂಬಿರುವ ಬಿಜೆಪಿ ತನ್ನ ಗುಪ್ತ ಅಜೆಂಡಾವಾದ ದಲಿತ ವಿರೋಧಿ ವಾತಾವರಣವನ್ನು ವ್ಯವಸ್ಥಿತವಾಗಿ ಸ್ಥಾಪಿಸುತ್ತಿರುವ ಪರಿಣಾಮದಿಂದಲೇ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ' ಎಂದು ಆರೋಪಿಸಿದೆ. 'ಕೇಸರಿ ಪಕ್ಷ ತನ್ನ ಸಂಪುಟದಲ್ಲಿ ದಲಿತರಿಗೆ ಅವಕಾಶ ನೀಡದೆ ತನಗಿರುವ ದಲಿತರ ಮೇಲಿನ ಅಸಹನೆಯನ್ನು ಬಹಿರಂಗಪಡಿಸಿದೆ' ಅಂತಾ ಕಾಂಗ್ರೆಸ್ ಕುಟುಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News