ಶಿಷ್ಟಾಚಾರ ಉಲ್ಲಂಘನೆ: ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ವಿರುದ್ಧ ಕ್ರಮ; ಸಚಿವ ಮಾಧುಸ್ವಾಮಿ

Update: 2021-09-21 14:29 GMT

ಬೆಂಗಳೂರು, ಸೆ. 21: `ಮೈಸೂರಿನ ಹಿಂದಿನ ಜಿಲ್ಲಾಧಿಕಾರಿಯಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಅಲ್ಲದೆ, ಅನುದಾನ ಬಳಕೆಗೆ ಆದೇಶ ನೀಡಿದ ಬಗ್ಗೆ ತನಿಖೆ ನಡೆಸಿ ಕಾನೂನು ಅನ್ವಯ ಕ್ರಮ ಕೈಗೊಳ್ಳಲಾಗುವುದು. ಆದರೆ, ಈ ವಿಷಯ `ಹಕ್ಕುಚ್ಯುತಿ' ವ್ಯಾಪ್ತಿಗೆ ಬರುವುದಿಲ್ಲ' ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯ ಸಾ.ರಾ.ಮಹೇಶ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, `ಸರಕಾರಿ ಅಧಿಕಾರಿಗಳು ಎಂದೂ ಸರ್ವಾಧಿಕಾರಿಗಳಾಗಬಾರದು. ನಿಯಮಗಳ ಅನ್ವಯ ಅವರು ಕೆಲಸ ಮಾಡಬೇಕು. ಯಾವುದೇ ಆದೇಶ ಹೊರಡಿಸುವ ಅಧಿಕಾರ ಇಲ್ಲ' ಎಂದರು.

`ಜನಪ್ರತಿನಿಧಿಗಳಿಗೆ ಅಗತ್ಯ ಗೌರವ ಹಾಗೂ ಮನ್ನಣೆ ನೀಡಬೇಕು. ಯಾವುದೇ ಕಾರಣಕ್ಕೂ ಯಾವುದೇ ಅಧಿಕಾರಿಯೂ ಶಿಷ್ಟಾಚಾರ ಉಲ್ಲಂಘನೆ ಮಾಡುವುದನ್ನು ಸರಕಾರ ಸಹಿಸುವುದಿಲ್ಲ. ಎಲ್ಲರೂ ಶಿಷ್ಟಾಚಾರವನ್ನು ಪಾಲಿಸಬೇಕು. ಯಾರೊಬ್ಬರ ಗೌರವಕ್ಕೂ ಧಕ್ಕೆ ಆಗಬಾರದು' ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸಾ.ರಾ.ಮಹೇಶ್, `ರಾಜ್ಯ ಹಾಗೂ ಕೇಂದ್ರ ಸರಕಾರ 15ನೆ ಹಣಕಾಸು ಯೋಜನೆಯಲ್ಲಿ ಅನುದಾನ ಬಿಡುಗಡೆ ಮಾಡಿದೆ. ನಾನು ಪುರಸಭೆ ಸದಸ್ಯ, ಅಲ್ಲಿನ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡಿ, ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸಿದರೆ, ಆ ಕ್ರಿಯಾ ಯೋಜನೆಯಗೆ ಅನುಮತಿ ನೀಡಿಲ್ಲ. 

ಕ್ರಿಯಾ ಯೋಜನೆ ಒಪ್ಪದಿದ್ದರೆ ವಾಪಸ್ ಕಳುಹಿಸಬೇಕು. ಆದರೆ, ಅವರೇ ತೀರ್ಮಾನ ಕೈಗೊಂಡಿದ್ದಾರೆ. ಅಲ್ಲದೆ, ಜಿ.ಪಂ. ಸಿಇಓ ಅಧಿಕಾರವನ್ನು ಮೊಟಕು ಮಾಡಿದ್ದಾರೆ. ಅಧಿಕಾರ ವಿಕೇಂದ್ರಿಕರಣಕ್ಕೆ ಅರ್ಥವೇ ಇರುವುದಿಲ್ಲ. ಅಲ್ಲದೆ, ಮೈಸೂರು ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರವನ್ನು ಡಿಸಿಯೇ ನಿರ್ವಹಿಸಿದರೆ ಹೇಗೇ? ಎಂದು ಪ್ರಶ್ನಿಸಿದರು. 

ಕೇವಲ ನಾಲ್ಕೈದು ರೂ.ಮೊತ್ತದ ಬಟ್ಟೆಯ ಕೈಚೀಲಕ್ಕೆ 59 ರೂ.ಗಳನ್ನು ನೀಡಿ 14.5 ಲಕ್ಷ ಕೈಚೀಲಗಳನ್ನು ಇವರೇ ತೀರ್ಮಾನ ಮಾಡಿ ಖರೀದಿ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿಯೂ ಔಷಧಿ ಖರೀದಿಗೆ ಸರಕಾರ ಹಣ ಬಿಡುಗಡೆ ಮಾಡಿದರೂ ಡಿಸಿ ಒಪ್ಪಿಗೆ ನೀಡಲಿಲ್ಲ. ಐಎಎಸ್ ಎಂದರೆ ಇಂಡಿಯನ್ ಆಡ್ಮಿನಿಸ್ಟ್ರೇಷನ್ ಸರ್ವಿಸ್ ಅಲ್ಲ. `ಐಯ್ಯಾಮ್ ಆಲ್‍ವೇಸ್ ಸೇಫ್' ಎಂಬ ಮನೋಭಾವ ಅವರಲ್ಲಿದೆ. ಹೀಗಾಗಿ ಶಾಸಕನಾಗಿ ನನ್ನ ಹಕ್ಕಿಗೆ ಚ್ಯುತಿಯಾಗಿದೆ. ಆದುದರಿಂದ ಈ ವಿಷಯವನ್ನು ಹಕ್ಕುಚ್ಯುತಿ ಸಮಿತಿಗೆ ವಹಿಸಬೇಕು ಎಂದು ಮಹೇಶ್ ಆಗ್ರಹಿಸಿದರು.

ಸರಕಾರದ ಉತ್ತರದಿಂದ ಸಮಾಧಾನಗೊಳ್ಳದ ಶಾಸಕ ಸಾ.ರಾ.ಮಹೇಶ್ ಮಾತನಾಡಲು ಮುಂದಾದರು. ಇದಕ್ಕೆ ಆಕ್ಷೇಪಿಸಿದ ಸ್ಪೀಕರ್ ಹಕ್ಕುಚ್ಯುತಿ ವಿಷಯ ಸುದೀರ್ಘ ಚರ್ಚೆಗೆ ಅವಕಾಶ ಇಲ್ಲ ಎಂದು ನಿರಾಕರಿಸಿದರು. ಈ ವೇಳೆ ಎದ್ದುನಿಂತ ಜೆಡಿಎಸ್ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ, `ಸರಕಾರದ ಅನುದಾನ ಡಿಸಿಯವರು ತಮ್ಮ ಇಚ್ಛೆಯಂತೆ ಬಳಕೆ ಮಾಡಲು ಅವಕಾಶವಿದೇಯೇ? ಶಾಸಕರ ವಿರುದ್ಧ ಮಾಧ್ಯಮಗೋಷ್ಠಿ ನಡೆಸಿದ್ದು, ಶಾಸಕರ ಹಕ್ಕುಚ್ಯುತಿ ವ್ಯಾಪ್ತಿಗೆ ಬರುವುದಿಲ್ಲವೇ?' ಎಂದು ಪ್ರಶ್ನಿಸಿದರು.

`ಶಾಸಕರ ಮನೆ ದುರಸ್ತಿಗೆ ಸರಕಾರ ಕೇವಲ ಮೂರು ಅಥವಾ ನಾಲ್ಕು ಲಕ್ಷ ರೂ.ಗಳನ್ನು ನೀಡುತ್ತದೆ. ಆದರೆ, ಜಿಲ್ಲಾಧಿಕಾರಿಗಳ ಮನೆ ದುರಸ್ತಿಗೆ ದೊಡ್ಡ ಮೊತ್ತದ ಹಣ ನೀಡಲಾಗಿದೆ. ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಸ್ಪೀಕರ್ ನಿವಾಸದಲ್ಲಿ ಈಜುಕೊಳ ಇಲ್ಲ. ಆದರೆ, ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಈಜುಕೊಳ ನಿರ್ಮಿಸಿದ್ದು, ಅವರ ಮನೆಗೆ ಒಂದು ತಿಂಗಳ ವಿದ್ಯುತ್ ಬಿಲ್ ನೋಡಿದರೆ ಅಚ್ಚರಿಯಾಗುತ್ತದೆ ಎಂದು ದಾಖಲೆ ಪ್ರದರ್ಶಿಸಿದರು. 

ಹಕ್ಕುಚ್ಯುತಿ ಪ್ರಸ್ತಾಪದಡಿಯಲ್ಲಿ ಹೀಗೆ ವಿವರಗಳನ್ನು ಮಾತನಾಡಲು ಅವಕಾಶವಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಸಾ.ರಾ.ಮಹೇಶ್‍ಗೆ ಅವಕಾಶ ನಿರಾಕರಿಸಿದ ಸ್ಪೀಕರ್ ಕಾಗೇರಿ, ಮಹೇಶ್ ನೀವು ಕುಳಿತುಕೊಳ್ಳಿ ಎಂದು ಸೂಚಿಸಿದರು.

ಇದಕ್ಕೆ ಆಕ್ಷೇಪಿಸಿದ ಸಾ.ರಾ.ಮಹೇಶ್ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿಗೆ ಮುಂದಾದರು. `ಅನುದಾನ ದುರ್ಬಳಕೆ ಮಾಡಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಇಂತಹ ಘಟನೆಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ' ಎಂದು ಮಾಧುಸ್ವಾಮಿ ಭರವಸೆ ನೀಡಿದ್ದರಿಂದ ಮಹೇಶ್ ಧರಣಿ ಹಿಂಪಡೆದು ತಮ್ಮ ಆಸನಕ್ಕೆ ಮರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News