ಬೆಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ

Update: 2021-09-21 15:05 GMT

ಬೆಂಗಳೂರು, ಸೆ.21: ಅವಧಿ ಪೂರ್ಣಗೊಂಡಿರುವ ಬೆಂಗಳೂರು ವಕೀಲರ ಸಂಘದ (ಎಎಬಿ) ಕಾರ್ಯಕಾರಿ ಸಮಿತಿಗೆ 2021ರ ಡಿ.22ರ ಒಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ. 

ಬೆಂ.ನಗರ ಜಿಲ್ಲಾಧಿಕಾರಿಯನ್ನು ಸಂಘದ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ 2021ರ ಸೆ.4ರಂದು ಸಹಕಾರ ಇಲಾಖೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂ.ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. 

ಚುನಾವಣೆ ನಡೆಸಲು ಎನ್.ಎಸ್.ಸತ್ಯನಾರಾಯಣ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ 7 ಸದಸ್ಯರನ್ನೊಳಗೊಂಡ ಉನ್ನತಾಧಿಕಾರ ಸಮಿತಿ ರಚನೆ ಮಾಡಿರುವ ಹೈಕೋರ್ಟ್, ಈ ಸಮಿತಿಯೇ 2021ರ ಡಿ.22ರೊಳಗೆ ಎಎಬಿ ಕಾರ್ಯಕಾರಿ ಸಮಿತಿಗೆ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಬೇಕು. ಸಂಘದ ಚುನಾವಣೆ ವಿಚಾರದಲ್ಲಿ ಉನ್ನತ ಮಟ್ಟದ ಸಮಿತಿಯು ರಾಜ್ಯ ಚುನಾವಣಾ ಆಯೋಗದಂತೆಯೇ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದೆ.

ಉನ್ನತ ಮಟ್ಟದ ಸಮಿತಿ ಚುನಾವಣೆಗೆ ಸಂಬಂಧಿಸಿದ ಎಲ್ಲ ಪರಿಕರಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು. ಸಂಘದ ಹಾಲಿ ಕಾರ್ಯಕಾರಿ ಸಮಿತಿ ಚುನಾವಣೆಗೆ ಅಗತ್ಯವಿರುವ ಸಿಬ್ಬಂದಿ, ಹಣ ಸೇರಿ ಎಲ್ಲ ಸೌಲಭ್ಯಗಳನ್ನು ಸಮಿತಿಗೆ ಒದಗಿಸಬೇಕು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಸಮಿತಿ ಸಿಸಿ ಕ್ಯಾಮರಾ ಅಳವಡಿಕೆ, ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿಸಬಹುದು. ಉನ್ನತ ಮಟ್ಟದ ಸಮಿತಿಗೆ ಸರಕಾರ ಅಗತ್ಯ ಪ್ರಮಾಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಒದಗಿಸಬೇಕು ಎಂದು ಆದೇಶಿಸಿರುವ ಹೈಕೋರ್ಟ್, ಚುನಾವಣೆ ನಡೆಸುವವರೆಗೂ ಹಾಲಿ ಕಾರ್ಯಕಾರಿ ಸಮಿತಿಯು ಸೀಮಿತ ಅಧಿಕಾರದೊಂದಿಗೆ ತಾತ್ಕಾಲಿಕ ಸಮಿತಿಯಾಗಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿದೆ.

ವಕೀಲ ಎ.ಪಿ.ರಂಗನಾಥ್ ಅಧ್ಯಕ್ಷತೆಯ ಬೆಂ.ವಕೀಲರ ಸಂಘದ ಹಾಲಿ ಕಾರ್ಯಕಾರಿ ಸಮಿತಿಯ ಅಧಿಕಾರವಧಿ 2021ರ ಜ.23ಕ್ಕೆ ಪೂರ್ಣಗೊಂಡಿತ್ತು. ಅವಧಿ ಪೂರ್ಣಗೊಂಡ ನಂತರವೂ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಸಂಘದ ಕಾರ್ಯ ಚಟುವಟಿಕೆ ನಿರ್ವಹಿಸಲು ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿತ್ತು.

ಬೆಂ. ವಕೀಲರ ಸಂಘದಲ್ಲಿ 20 ಸಾವಿರಕ್ಕೂ ಅಧಿಕ ನೋಂದಾಯಿತ ವಕೀಲರಿದ್ದಾರೆ. ಇಡೀ ದೇಶದಲ್ಲಿ ಅತಿದೊಡ್ಡ ವಕೀಲರ ಸಂಘ ಎಂಬ ಹಿರಿಮೆಗೂ ಸಂಘವು ಪಾತ್ರವಾಗಿದೆ. ಅಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ಒಳಗೊಂಡು 29 ಸದಸ್ಯರನ್ನು ಕಾರ್ಯಕಾರಿ ಸಮಿತಿ ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News