ಕುಸ್ತಿ ಅಖಾಡಕ್ಕಿಳಿದವರಂತೆ ಮಾತನಾಡಬೇಡಿ: ಈಶ್ವರ್ ಖಂಡ್ರೆಗೆ ಸ್ಪೀಕರ್ ಕಾಗೇರಿ ಎಚ್ಚರಿಕೆ

Update: 2021-09-21 15:22 GMT
 ಸ್ಪೀಕರ್  ವಿಶ್ವೇಶ್ವರ ಹೆಗಡೆ ಕಾಗೇರಿ 

ಬೆಂಗಳೂರು, ಸೆ. 21: `ಏನೇ ಕೇಳುವುದಿದ್ದರೂ ಸಮಾಧಾನದಿಂದ ಕೇಳಿ. ಅದನ್ನು ಬಿಟ್ಟು ಕುಸ್ತಿ ಅಖಾಡದಲ್ಲಿ ನಿಂತವರಂತೆ ಏರಿದ ಧ್ವನಿಯಲ್ಲಿ ಮಾತನಾಡುವುದು ಸರಿಯಾದ ನಡವಳಿಕೆಯಲ್ಲ' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ ಸದಸ್ಯ ಈಶ್ವರ್ ಖಂಡ್ರೆ ಅವರನ್ನು ಎಚ್ಚರಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಕಪ್ಪುಶಿಲೀಂದ್ರ (ಬ್ಲಾಕ್ ಫಂಗಸ್) ಸೋಂಕಿತರಿಗೆ ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಜೀವ ರಕ್ಷಕ ಔಷಧಿಗಳಿಲ್ಲ. ಹೀಗಾಗಿ ಐದು ಮಂದಿ ಸಾವನ್ನಪ್ಪಿದ್ದು, ಸರಕಾರ ಕೂಡಲೇ ಜೀವರಕ್ಷಕ ಔಷಧಿಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಸರಕಾರದ ಪರವಾಗಿ ಉತ್ತರ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, `ಬ್ಲಾಕ್ ಫಂಗಸ್ ಸೋಂಕಿಗೆ ಅಗತ್ಯವಿರುವ ಕೆಲ ಔಷಧಿಗಳ ಕೊರತೆ ಇದ್ದು, ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ಔಷಧ ಪೂರೈಕೆಗೆ ಸರಕಾರ ಕ್ರಮ ವಹಿಸಲಿದೆ. ಈಗಾಗಲೇ ಕಪ್ಪು ಶಿಲೀಂದ್ರ ಸೋಂಕಿತರಿಗೆ ಸರಕಾರ ಉಚಿತ ಚಿಕಿತ್ಸೆ ಕೊಡಿಸುತ್ತಿದೆ' ಎಂದರು.

ಸರಕಾರದಿಂದ ತೃಪ್ತರಾಗದ ಈಶ್ವರ್ ಖಂಡ್ರೆ, ಸರಕಾರ ಕೂಡಲೇ ಔಷಧ ಪೂರೈಕೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದ ಧರಣಿಗೆ ಮುಂದಾದರು. ಅವರಿಗೆ ಸದಸ್ಯರಾದ ರಾಜಶೇಖರ್ ಪಾಟೀಲ್ ಮತ್ತು ಅಜಯ್ ಸಿಂಗ್ ಬೆಂಬಲ ನೀಡಿದರು. ಈ ವೇಳೆ ಏರಿದ ಧ್ವನಿಯಲ್ಲಿ `ಜಿಲ್ಲೆಯಲ್ಲಿ ಜನ ಸಾಯುತ್ತಿದ್ದಾರೆ' ಎಂದು ಈಶ್ವರ್ ಖಂಡ್ರೆ ಹೇಳಿದರು.

ಇದರಿಂದ ಕೆರಳಿದ ಸ್ಪೀಕರ್ ಕಾಗೇರಿ, `ಇದೇನು ಕುಸ್ತಿ ಅಖಾಡವೇ. ಏನೇ ಕೇಳುವುದಿದ್ದರೂ ಸಮಾಧಾನದಿಂದ ಕೇಳಿ, ಸದನದಲ್ಲಿ ಹೀಗೆ ವರ್ತಿಸುವುದು ಸರಿಯಲ್ಲ' ಎಂದು ಆಕ್ಷೇಪಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, `ಬ್ಲಾಕ್ ಫಂಗಸ್ ಸೋಂಕಿತರಿಗೆ ಕೂಡಲೇ ಔಷಧಿ ಪೂರೈಕೆಗೆ ಸರಕಾರ ಕ್ರಮ ವಹಿಸಬೇಕು' ಎಂದು ಸಲಹೆ ಮಾಡಿದರಲ್ಲದೆ, ತಮ್ಮ ಸದಸ್ಯರನ್ನು ತಮ್ಮ ಸ್ಥಾನಗಳಿಗೆ ಮರಳಲು ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News